ಜಿಲ್ಲಾ ಆಸ್ಪತ್ರೆ ಸ್ಥಳದಲ್ಲಿ ಜಿಲ್ಲಾಡಳಿತಕ್ಕೆ ವಿರೋಧ್ಙ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 9
ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ನಗರದ ಜಿಲ್ಲಾ ಆಸ್ಪತ್ರೆಯ ಹಾಲಿ ಕಟ್ಟಡವಿರುವ ಸ್ಥಳದಲ್ಲಿ ನಿರ್ಮಾಣ ಮಾಡುವುದಕ್ಕೆ ಜನಸಂಗ್ರಾಮ ಪರಿಷತ್ ಮತ್ತಿತರೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ನಗರದಲ್ಲಿ ಬುಧವಾರ ಜನಸಂಗ್ರಾಮ ಪರಿಷತ್, ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ. ವಿ.ಎ. ಮಾಲಿಪಾಟೀಲ್, ರಾಘವೇಂದ್ರ ಕುಷ್ಟಗಿ ಈ ಕುರಿತು ವಿರೋಧ ವ್ಯಕ್ತಪಡಿಸಿದರು.
ಮೂರ್ಖತನದ ನಿರ್ಧಾರ: ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸದ್ಯದ ಜಿಲ್ಲಾ ಆಸ್ಪತ್ರೆ ಕಟ್ಟಡವಿರುವ ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿದೆ ಎಂದು ಗೊತ್ತಾಗಿದ್ದು, ಈ ಸ್ಥಳವು ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ಅನುಕೂಲಕರವಲ್ಲ. ಬದಲಿಗೆ ಚಿಕಿತ್ಸೆಗೆ ಆಗಮಿಸುವ ಎಲ್ಲರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಲಿದೆ ಎಂದು ಆರೋಪಿಸಿದರು.
ಜಿಲ್ಲಾ ಆಸ್ಪತ್ರೆ, ಒಪೆಕ್ ಮತ್ತು ರಿಮ್ಸ್ ವೈದ್ಯಕೀಯ ಕಾಲೇಜಿರುವ ಸ್ಥಳವನ್ನು ಆರೋಗ್ಯ ಕ್ಷೇತ್ರದ ವಿವಿಧ ಸೌಲಭ್ಯಗಳ ತಾಣವಾಗಿ ಅಭಿವೃದ್ಧಿ ಪಡಿಸುವುದು ಬೆಳೆಯುತ್ತಿರುವ ನಗರದ ದೃಷ್ಟಿಯಿಂದ ಸೂಕ್ತವೆನಿಸಲಿದೆ. ಆದರೆ ಆರೋಗ್ಯ ಇಲಾಖೆಯ ವಿವಿಧ ಕಟ್ಟಡಗಳು ಹಾಗೂ ತರಬೇತಿ ಕೇಂದ್ರಗಳಿರುವ ಸ್ಥಳದಲ್ಲಿಯೇ 3 ಕೋಟಿ ಮೌಲ್ಯದ ಕಟ್ಟಡ ತೆರವುಗೊಳಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗುವುದು ಮೂರ್ಖತನದ ನಿರ್ಧಾರವಾಗಲಿದೆ ಎಂದು ಟೀಕಿಸಿದರು.
ನಿರ್ಲಕ್ಷ್ಯ ಧೋರಣೆ: ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಬ್ಬರೂ ವೈದ್ಯರಾಗಿದ್ದು, ಆರೋಗ್ಯ ಇಲಾಖೆಗೆ ಸೇರಿದ ಅನುಕೂಲಕರ ಜಾಗವನ್ನು ಜಿಲ್ಲಾಡಳಿತಕ್ಕೆ ಒದಗಿಸಲು ಮುಂದಾಗಿರುವುದು ದುರದೃಷ್ಟಕರ ಸಂಗತಿ. ಶಾಸಕರಿಗೆ ಈಗಾಗಲೇ ಮನವರಿಕೆ ಮಾಡಿದ್ದರೂ ಅವರು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆಂದು ಆರೋಪಿಸಿದರು.
ಸದ್ಯ ಜಿಲ್ಲಾ ಆಸ್ಪತ್ರೆಯೊಂದೇ ಅದರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು ಇನ್ನುಳಿದಂತೆ ಜಿಲ್ಲಾ ಸರ್ಕಾರಿ ಔಷಧ ಸರಬರಾಜು ದಾಸ್ತಾನು ಕಟ್ಟಡ, ಜಿಲ್ಲಾ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಮತ್ತು ವಸತಿ ಕೇಂದ್ರ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಕೇಂದ್ರ, ಆಯುರ್ವೇದ ಪಂಚಕರ್ಮ ಚಿಕಿತ್ಸೆ ಘಟಕ, ಜಿಲ್ಲಾಸ್ಪತ್ರೆಯ ಆಡಳಿತ ಕಚೇರಿಯ ಕಟ್ಟಡಗಳು ಸುಸ್ಥಿತಿಯಲ್ಲಿವೆ. ಆದರೂ ಅವುಗಳನ್ನು ತೆರವುಗೊಳಿಸಿದಲ್ಲಿ 3 ಕೋಟಿ ಮೊತ್ತದ ಆಸ್ತಿಗೆ ಸರ್ಕಾರವೇ ಮುಂದೆ ನಿಂತು ಹಾನಿಯುಂಟು ಮಾಡಿದಂತಾಗುತ್ತದೆ ಎಂದು ದೂರಿದರು.
ಭವಿಷ್ಯದ ಗತಿಯೇನು?: ಸದ್ಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ವಿವಿಧ ಕಟ್ಟಡಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ನಿರ್ಮಿಸಿದ್ದು, ಈ ಎಲ್ಲ ಕಟ್ಟಡಗಳನ್ನು ಒಡೆದು ಹಾಕಿದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಘಟಕಗಳ ಭವಿಷ್ಯದ ಗತಿಯೇನು ಎಂಬುದನ್ನು ಸರ್ಕಾರ ಚಿಂತಿಸಬೇಕಿದೆ ಎಂದು ಆಗ್ರಹಿಸಿದರು.
ಈಗಾಗಲೇ ಈ ಕುರಿತು ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದು ಅವರಿಂದಲೂ ಸಹಮತ ವ್ಯಕ್ತವಾಗಿದೆ. ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪರ್ಯಾಯ ಸ್ಥಳ ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮುಂದಾಗುವಂತೆ ಸಂಘಟನೆಯ ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಬಂದಪ್ಪಗೌಡರು, ಡಾ. ರಾಜೇಶ್ ಕೆ., ಡಾ. ಶರಣಪ್ಪ ಬಲ್ಲಟಗಿ, ಅಕ್ಬರ್ ಹುಸೇನ್ ನಾಗುಂಡಿ ಸೇರಿದಂತೆ ಅನೇಕರಿದ್ದರು.