ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಮಾಜಿಕ ಸಮಸ್ಯೆಗೆ ಜನಸಂಖ್ಯೆ ಸ್ಫೋಟ ಕಾರಣ

Mainashree
Updated On : 12 Jul 2014, 10:13 am

ರಾಯಚೂರು: ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ದೇಶದ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣವಾಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶದಲ್ಲಿ ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತಗೊಳ್ಳದೇ ಜನಸಂಖ್ಯೆಯ ನಿಯಂತ್ರಣಾ ಕ್ರಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾಗುವುದು ಅವಶ್ಯಕ ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಜನಸಂಖ್ಯೆಯ ಹೆಚ್ಚಳದಿಂದಾಗುವ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಅವಶ್ಯ. ಆಗ ಮಾತ್ರ ಮುಂದಾಗುವ ಅನಾಹುತಗಳನ್ನು ತಡೆಯಬಹುದಾಗಿದೆ ಎಂದು ಎಚ್ಚರಿಸಿದರು.
ಆರೋಗ್ಯ ಕಾಪಾಡುವುದೂ ಕಷ್ಟ: ಒಳ್ಳೆಯ ಆರೋಗ್ಯದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದರೆ ಜನಸಂಖ್ಯೆಯ ಹೆಚ್ಚಳದಿಂದ ಆರೋಗ್ಯ ಕಾಪಾಡಿಕೊಳ್ಳುವುದೂ ಕಷ್ಟ ಸಾಧ್ಯ. ಸಹಜವಾಗಿಯೇ ಅದು ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಆರೋಗ್ಯ, ಆಹಾರ, ಜೀವನ ವಿಧಾನ ಮರೆಯಾಗುವ ಆತಂಕವಿದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ನಾರಾಯಣ ಮಾತನಾಡಿ, ಜನಸಂಖ್ಯೆ ಬೆಳವಣಿಗೆ ಇಡೀ ಜಗತ್ತಿನ ಸಮಸ್ಯೆಯಾಗಿದೆ. ಹೀಗೆ ಜನಸಂಖ್ಯೆ ಹೆಚ್ಚಾಗುತ್ತಾ ಹೋದಲ್ಲಿ ಮೂಲಸೌಲಭ್ಯ ಎಲ್ಲರಿಗೂ ದೊರೆಕಿಸುವುದು ಸವಾಲಾಗಿ ಪರಿಣಮಿಸಲಿದೆ ಎಂದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಮಹಾದೇವಿ, ಐಎಂಎ ಅಧ್ಯಕ್ಷ ಡಾ. ಸಿ.ಎನ್. ಕುಲಕರ್ಣಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಕ್ಷ್ಮಿಕಾಂತಮ್ಮ, ಡಿಡಿಪಿಯು ಕಲ್ಲಯ್ಯ ಸಿ.ಟಿ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ ಉಪಸ್ಥಿತರಿದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಇಲಾಖೆ ಸಿಬ್ಬಂದಿಯಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement