ಮಕ್ಕಳಲ್ಲಿ ಪರಿಸರ ಕಾಳಜಿ ಜಾಗೃತಿ ಮೂಡಿಸಿ
ಲಿಂಗಸ್ಗೂರು: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜಬಾಬ್ದಾರಿಯಾಗಿದ್ದು, ಮಕ್ಕಳಲ್ಲಿಯೂ ಸಹ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಶಿಕ್ಷಣಕರ ಹಾಗೂ ಪಾಲಕರ ಕರ್ತವ್ಯವಾಗಿದೆ ಎಂದು ಲಿಂಗಸ್ಗೂರು ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಆರ್.ವೈ. ಶಶಿಧರ ಹೇಳಿದರು.
ತಾಲೂಕಿನ ಸರ್ಜಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ಮರ ಸಂರಕ್ಷಣೆ ಸಪ್ತಾಹ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ, ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಲ್ಯಾವಸ್ಥೆಯಲ್ಲಿ ಪರಿಸರ ಪ್ರೇಮ, ಗಿಡ-ಮರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ನ್ಯಾಯವಾದಿ ಹನುಮಂತಪ್ಪ ಪೀಡನೆಯ ವಿರೋಧಿ ಕಾನೂನು ಬಗ್ಗೆ ಹಾಗೂ ನ್ಯಾಯವಾದಿ ಅನಿಲ್‌ಕುಮಾರ ದೈನಂದಿನ ಕಾನೂನು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಬಿ.ದ್ಯಾವಪ್ಪ, ಜಿಪಂ ಸದಸ್ಯೆ ದುರುಗಮ್ಮ ನಾಯಕ, ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ಪಾಟೀಲ್, ವಲಯ ಅರಣ್ಯಾಧಿಕಾರಿ ಪ್ರಭಾಕರ, ಹುಸೇನ್‌ಸಾಬ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮುದುಕಪ್ಪ, ಮುಖ್ಯ ಶಿಕ್ಷಕಿ ಸರೋಜಾ ಪೋಳ್, ಎಸ್.ಎಸ್. ಪಾಟೀಲ್, ಭೂಪನಗೌಡ, ವಿಶ್ವನಾಥ, ಅರುಣಕುಮಾರ ಇದ್ದರು.