ಕುರಕುಂಟಾ ಸಿಮೆಂಟ್ ಕಾರ್ಖಾನೆ ಪುನಾರಂಭಕ್ಕೆ ಸೂರ್ಯವಂಶಿ ಮನವಿ
ಸೇಡಂ: ಬಂಡವಾಳ ಕೊರತೆಯಿಂದ 1998ರಲ್ಲಿ ಸ್ಥಗಿತಗೊಂಡಿರುವ ಕುರಕುಂಟಾದ ಸಿಸಿಐ ಸಿಮೆಂಟ್ ಕಾರ್ಖಾನೆಯನ್ನು ಪುನರಾರಂಭಿಸಲು ಒತ್ತಾಯಿಸಿ ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ಶೈಲೇಂದ್ರಕುಮಾರ ಸೂರ್ಯವಂಶಿ ಹಾಗೂ ಗ್ರಾಮಸ್ಥರು ದೆಹಲಿಯ ಸಿಮೆಂಟ್ ಪೌರಸಂಸ್ಥೆಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಭಾರತ ಸರ್ಕಾರದ ಅಧೀನದಲ್ಲಿರುವ ಸಿಸಿಐ ಕಂಪನಿ ಬಂದ್ ಆಗಿರುವುದರಿಂದ ಕೋಟ್ಯಂತರ ರು. ಬೆಲೆಬಾಳುವ ಯಂತ್ರಗಳು ಕಂಪನಿಯಲ್ಲಿ ತುಕ್ಕು ಹಿಡಿಯುತ್ತಿವೆ. ಅಲ್ಲದೆ ಕಂಪನಿ ಸ್ಥಗಿತಗೊಳಿಸಿರುವುದರಿಂದ ಬೀದಿಪಾಲಾದ ಸಾವಿರಾರು ಕುಟುಂಬಗಳು ಈಗಲೂ ಕಾರ್ಖಾನೆ ಪ್ರಾರಂಭಿಸಿದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದೆ. ಸಿಮೆಂಟ್ ಉತ್ಪಾದನೆಗೆ ಬೇಕಾಗುವ ಬಹುತೇಕ ಕಚ್ಚಾ ಸಾಮಗ್ರಿಗಳು ಇಲ್ಲಿ ಹೇರಳವಾಗಿದ್ದು, ಕಾರ್ಮಿಕ ಸಚಿವರ ಗಮನಕ್ಕೂ ಕಂಪನಿ ಪ್ರಾರಂಭಿಸುವಂತೆ ಮನವಿ ಮಾಡಲಾಗಿದೆ. ಕೂಡಲೇ ಸಿಸಿಐ ಆಡಳಿತ ವರ್ಗ ಈ ಕುರಿತು ಚರ್ಚಿಸಿ ಕಂಪನಿ ಪ್ರಾರಂಭಿಸಬೇಕು ಎಂದು ಗ್ರಾಮದ ರಮೇಶ ಚವ್ಹಾಣ, ರಮೇಶ ಮುರಗೋಳ ಮನವಿಯಲ್ಲಿ ಕೋರಿದ್ದಾರೆ.