ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಿನಗೂಲಿ ನೌಕರರಿಗೆ ಸೌಕರ್ಯ ಶೀಘ್ರ; ಭರವಸೆ

Rashmi Kasaragodu
Updated On : 17 Jul 2014, 11:20 am

ಗುಲ್ಬರ್ಗ: ವಿವಿಧ ಇಲಾಖೆಗಳು, ನಿಗಮ- ಮಂಡಳಿಗಳಲ್ಲಿ ಸೇವೆಯಲ್ಲಿರುವ 23 ಸಾವಿರ ದಿನಗೂಲಿ ನೌಕರರಿಗೆ ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಧಿ ಅಧಿನಿಯಮ-2012ರಂತೆ ಸೌಕರ್ಯಗಳನ್ನು ಕಲ್ಪಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಆಸಕ್ತಿ ತೋರಿದ್ದಾರೆಂದು ಶ್ರಮಜೀವಿಗಳ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧೇಯಕದಲ್ಲಿ ಸೂಚಿತವಾಗಿರುವ ಸವಲತ್ತುಗಳು ಬೇಗನೆ ದಿನಗೂಲಿಗಳಿಗೆ ದೊರಕಬೇಕೆಂದು ಸಂಘ ಮುಖ್ಯ ಕಾರ್ಯದರ್ಶಿಗಳಿಗೆ ಆಗ್ರಹಿಸಿದೆ. ಈ ಸಂಬಂಧ ಡಿಪಿಎಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ವಿವರಗಳನ್ನು ಕೂಡಲೇ ಒದಗಿಸುವಂತೆ ಸೂಚಿಸಿದ್ದಾರೆ. ಈ ಪ್ರಕ್ರಿಯೆ ಚುರುಕಾಗಿ ನಡೆಸುವಂತೆಯೂ ಸೂಚಿಸಿದ್ದಾರೆಂದು ಹೇಳಿದರು.
ಮಾಹಿತಿ ನೀಡದ್ದಕ್ಕೆ ವಿಳಂಬ: ಹಲವಾರು ಇಲಾಖೆಗಳವರು ಸೂಕ್ತ ಮಾಹಿತಿ ನೀಡದ ಕಾರಣ ವಿಳಂಬವಾಗುತ್ತಿರುವ ಸಂಗತಿ ಚರ್ಚಿಸಲಾಯ್ತು. ಇಲಾಖಾವಾರು ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸುವಂತೆಯೂ ಮುಖ್ಯಕಾರ್ಯದರ್ಶಿಗಳು ಸೂಚಿಸಿದ್ದಾರೆ. ಸಂಘ ಈ ಕುರಿತಂತೆ ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಮುಖರ್ಜಿ ಸ್ಪಂದಿಸಿದ್ದಾರೆಂದು ಹಿರೇಮಠ ಹೇಳಿದ್ದಾರೆ.
2000ರಿಂದಲೇ ದೊರಕಲಿ: ವಿಧೇಯಕದಲ್ಲಿನ ಸವಲತ್ತುಗಳು ದಿನಗೂಲಿಗಳಿಗೆ 2013ರಿಂದ ದೊರಕಬೇಕೆಂದು ಸೂಚಿಸಲಾಗಿತ್ತು. ಇದು ನೌಕರರ ಪಾಲಿಕೆ ತುಂಬ ಕಡಿಮೆ ಅವಧಿಯಾಗುತ್ತದೆ. 2000ರಿಂದಲೇ ಸವಲತ್ತುಗಳು ನೌಕಕರಿಗೆ ದೊರಕುವಂತಾಗಬೇಕೆಂದು ಆಗ್ರಹಿಸಿದ್ದೇವೆ. ಇದಕ್ಕಾಗಿ ವಿಧೇಯಕದಲ್ಲಿ ತಿದ್ದುಪಡಿ ತಂದು ಸೌಕರ್ಯ ಒದಗಿಸಲಾಗುತ್ತಿದೆ. 2000ನೇ ಇಸ್ವಿಯಿಂದಲೇ ಸೌಕರ್ಯಕ್ಕೆ ದಿನಗೂಲಿಗಳು ಅರ್ಹರಾಗಿರುತ್ತಾರೆ.
ಈ ದಿನಗೂಲಿಗಳಿಗೆ ಹಳೆಯ ಪಿಂಚಣಿ ಯೋಜನೆಯೇ ಅನ್ವಯವಾಗಿಸಬೇಕೆಂಬ ಆಗ್ರಹವನ್ನು ಸಂಘದ ಪರವಾಗಿ ಮಾಡಲಾಗಿದೆ. ಅನುಕಂಪದ ನೌಕರಿಗೂ ಯತ್ನಿಸಲಾಗುತ್ತಿದೆ. ಇವೆರಡೂ ಬೇಡಿಕೆಗಳ ಈಡೇರಿಕೆಗೆ ಸಂಘ ಶಕ್ತಿಮೀರಿ ಯತ್ನಿಸುತ್ತಿದೆ ಎಂದೂ ಶ್ರಮಜೀವಿಗಳ ವೇದಿಕೆಯ ಅಧ್ಯಕ್ಷ ಹಿರೇಮಠ ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement