ನಗರಸಭೆ ಸದಸ್ಯರ ವರ್ತನೆಗೆ ಟೀಕೆ
ರಾಯಚೂರು: ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರನ್ನು ಪದಚ್ಯುತಗೊಳಿಸಲು ಸದಸ್ಯರು ಅನುಸರಿಸಿದ ತಂತ್ರವು ಸಂವಿಧಾನ ವಿರೋಧಿಯಾಗಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಆರೋಪಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ಕಾರ್ಯದರ್ಶಿ ಕೆ.ಜಿ. ವೀರೇಶ್, ಸರ್ಕಾರ ನಿಗದಿಪಡಿಸಿದ ಮೀಸಲಾತಿಯಂತೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಾದೇವಿ ಅವರು ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸದೆ ಅವರ ವಿರುದ್ಧ ನಗರಸಭೆ ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಸಂವಿಧಾನ ವಿರೋಧಿ ಹಾಗೂ ಸಾಮಾಜಿಕ ನ್ಯಾಯ ವಿರೋಧಿ ವರ್ತನೆಯಾಗಿದೆ ಎಂದು ಟೀಕಿಸಿದ್ದಾರೆ.
ಮೀಸಲು ವಿರೋಧಿ: ಮೀಸಲಾತಿ ಆಶಯವನ್ನೇ ಬುಡಮೇಲು ಮಾಡುವ ಕೃತ್ಯ ಸದಸ್ಯರು ಎಸಗಿದ್ದಾರೆ. ಸದಸ್ಯರ ಇಂತಹ ವರ್ತನೆ ಖಂಡನೀಯ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಹೊಂದಾಣಿಕೆಯ ರಾಜಕೀಯ ಹಾಗೂ ಮೀಸಲು ವಿರೋಧಿ ನೀತಿಯನ್ನು ಅವಿಶ್ವಾಸ ಅಂಗೀಕಾರವು ಹೊರಹಾಕಿದೆ ಎಂದು ದೂರಿದ್ದಾರೆ. ಪರಿಶಿಷ್ಟ ಪಂಗಡದ ಏಕೈಕ ಸದಸ್ಯೆಯಾಗಿರುವ ಮಹಾದೇವಿ ನಾಯಕ ಅವರಿಗೆ ನ್ಯಾಯ ದೊರಕಿಸುವ ಕಾರ್ಯ ಜಿಲ್ಲಾಡಳಿತ ಮಾಡಬೇಕು. ಅವಿಶ್ವಾಸ ಅಂಗೀಕಾರದ ನಿರ್ಣಯವನ್ನು ಕೂಡಲೇ ತಡೆಹಿಡಿಯಬೇಕು. ಮೀಸಲಿನಂತೆ ಅಧ್ಯಕ್ಷ ಸ್ಥಾನಕ್ಕೆ ಏರುವವರು ಅವಧಿ ಮುಗಿಯುವವರೆಗೆ ಪದಚ್ಯುತಗೊಳಿಸಲು ಅವಕಾಶ ನೀಡದಂತೆ ಕಾನೂನಿನಲ್ಲಿ ಸರ್ಕಾರ ಮಾರ್ಪಾಟು ಮಾಡುವಂತೆ ಆಗ್ರಹಿಸಿದ್ದಾರೆ.