ಕಂಪ್ಯೂಟರ್ ಆಪರೇಟರ್ ವಜಾಕ್ಕೆ ರೈತ ಸಂಘ, ಗ್ರಾಮಸ್ಥರ ಒತ್ತಾಯ
ಸಿಂಧನೂರು: ತಾಲೂಕಿನ ಅಲಬನೂರು ಗ್ರಾಪಂ ಕಂಪ್ಯೂಟರ್ ಆಪರೇಟರ್ ಕರ್ತವ್ಯ ಲೋಪವೆಸಗಿರುವುದರಿಂದ ಅವರನ್ನು ವಜಾಗೊಳಿಸುವಂತೆ ಕರ್ನಾಟಕ ರೈತ ಸಂಘ ಹಾಗೂ ಕನ್ನಾರಿ, ಮಲದಿನ್ನಿಕ್ಯಾಂಪ್, ಬಿ.ಆರ್.ಕ್ಯಾಂಪ್, ಬೆಳಗುರ್ಕಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು, ಕಂಪ್ಯೂಟರ್ ಆಪರೇಟರ್ ಶರಣಬಸವ ಅವರು ಗ್ರಾಪಂ ಆಡಳಿತ ಮಂಡಳಿಯ ನಿರ್ಧಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಮನಸೋಯಿಚ್ಛೆ ವರ್ತಿಸುತ್ತಿದ್ದು, ಇದರಿಂದ ತಮಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಿಗುತ್ತಿಲ್ಲ. ವಸತಿ ಯೋಜನೆಗಳಲ್ಲಿ ಮಂಜೂರಾದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೇ ಅನರ್ಹರಿಗೆ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಯಾವುದೇ ಕೆಲಸ ಕಾರ್ಯಗಳ ನಿಮಿತ್ತ ಕಂಪ್ಯೂಟರ್ ಆಪರೇಟರ್‌ಗೆ ಸಂಪರ್ಕಿಸಿದರೆ ಅಸಭ್ಯವಾಗಿ ವರ್ತಿಸುತ್ತಾರೆಂದು ಅವರು ಆಪಾದಿಸಿದ್ದಾರೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡದೇ ಅವ್ಯವಹಾರಕ್ಕೆ ಕಾರಣವಾಗಿರುವ ಕಂಪ್ಯೂಟರ್ ಆಪರೇಟರ್ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಅವ್ಯವಹಾರ ನಡೆಸಿರುವ ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಾಪಂ ಇಒ ಮತ್ತು ಜಿಪಂ ಸಿಇಒಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.