ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜ್ಞಾನಪೀಠಿಗಳ ಕಣ್ಣೇಕೆ ಹಸಿರು?

Rashmi Kasaragodu
Updated On : 19 Jul 2014, 11:45 am

ಕ.ಪ್ರ. ವಾರ್ತೆ   ಗುಲ್ಬರ್ಗ   ಜು. 18
ವೃತ್ತಿ ರಂಗಭೂಮಿಯ ಬಗ್ಗೆ, ಅಲ್ಲಿನ ನಾಟಕ ಸಾಹಿತ್ಯ, ನಾಟಕಕಾರರ ಬಗ್ಗೆ ಜ್ಞಾನಪೀಠಿಗಳು ಕೀಳುಭಾವನೆ ಹೊಂದಿದ್ದಾರೆ ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಕೆ. ಶೇಖ್ ಮಾಸ್ಟರ್ ಯಾರ ಹೆಸರನ್ನೂ ಪ್ರಸ್ತಾಪಿಸದೆ ಜ್ಞಾನಪೀಠಿಗಳ ಧೋರಣೆಯ ಬಗ್ಗೆ ಖಾರವಾದ ಹೇಳಿಕೆ ನೀಡಿದ್ದಾರೆ.
ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಎರಡೂ ಅಳಿವಿನಂಚಲ್ಲಿವೆ. ಇವುಗಳನ್ನು ಪೋಷಿಸುವ, ಅಲ್ಲಿನ ಕಲಾವಿದರು, ನಾಟಕಕಾರರನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕಾಗಿದೆ. ಆದರೆ ನಮ್ಮ ಜ್ಞಾನಪೀಠಿಗಳು ವೃತ್ತಿ ರಂಗಭೂಮಿಯ ಬಗ್ಗೆ ಅದ್ಯಾಕೋ ಕೀಳುಭಾವನೆಯನ್ನೇ ಹೊಂದಿದ್ದಾರೆ. ನಾಟಕಕಾರರು ಸಾಹಿತಿಗಳಲ್ವಾ, ಇವರು ಬರೆಯೋದು ಸಮಾಜ ತಿದ್ದುವ ಸಾಹಿತ್ಯ ಅಲ್ವಾ ಎಂದು ಶೇಖ್ ಮಾಸ್ಟರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ರಂಗ ಸಂಗಮ ವೇದಿಕೆಯಡಿಯಲ್ಲಿ ನಡೆದ ಜಂಗಮಶೆಟ್ಟಿ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶೇಖ್ ಮಾಸ್ಟರ್, ವೃತ್ತಿ ರಂಗಭೂಮಿ ಅಂದ್ರೆ ಕೇವಲ ದ್ವಂದ್ವಾರ್ಥ(ಡಬ್ಬಲ್ ಮೀನಿಂಗ್) ಹಾಗೂ ಅಶ್ಲೀಲ ಪದಗಳನ್ನು ಬಳಸುವ ಕಲೆ ಎಂಬರ್ಥವನ್ನು ಯಾರೂ ಹೊಂದಬಾರದೆಂದು ಹೇಳುವ ಮೂಲಕ ವೃತ್ತಿ ರಂಗಭೂಮಿಯ ಪ್ರತಿ ಜನಮಾನಸದಲ್ಲಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಗುಲ್ಬರ್ಗದ ಲಾಲ ಅಹ್ಮದ್ ಬಂದಾ ನವಾಜ್ ಶೇಖ್ ಅಲ್ದಾಳರು 200ಕ್ಕೂ ಹೆಚ್ಚು ನಾಟಕ ಬರೆದಿದ್ದಾರೆ. ಇವರಿಗೆ ಯಾರು ಪುರಸ್ಕಾರ ಕೊಡುತ್ತಾರೆ, ವೃತ್ತಿ ರಂಗದಲ್ಲಿನ ಇಂತಹ ಸಾಹಿತಿಗಳನ್ನೂ ಜ್ಞಾನಪೀಠದಂತಹ ಪುರಸ್ಕಾರ ನೀಡುವ ಮೂಲಕ ಗುರುತಿಸುವ ಕೆಲಸವಾಗಲೇಬೇಕು ಎಂದರು.


ಬಸವರಾಜಯ್ಯಸ್ವಾಮಿಗೆ ಜಂಗಮಶೆಟ್ಟಿ ರಂಗಪುರಸ್ಕಾರ


ರಂಗ ಸಂಗಮ ಕಲಾ ವೇದಿಕೆಯ ಚೊಚ್ಚಿಲ ಪುರಸ್ಕಾರ ರೂಪದಲ್ಲಿ 10 ಸಾವಿರ ನಗದು ಫಲಕ ಹಾಗೂ ಪುರಸ್ಕಾರ ಒಳಗೊಂಡ ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ಚಿತ್ತಾಪುರ ತಾಲೂಕಿನ ಭೀಮಳ್ಳಿಯ ಹಾರ್ಮೋನಿಯಂ ವಾದಕ ಬಸವರಾಜಯ್ಯ ಸ್ವಾಮಿ ಅವರಿಗೆ ನೀಡಲಾಯ್ತು. ಬಣ್ಣಬಣ್ಣದ ಸಮಾರಂಭದಲ್ಲಿ ತಮ್ಮನ್ನು ಆದರರಿಂದ ಕಂಡು ಪುರಸ್ಕಾರ ನೀಡಿದಾಗ ಬಸವರಾಜಯ್ಯ ಸ್ವಾಮಿ ಪುಳಕಿತರಾದರು. ರಂಗಭೂಮಿಯಲ್ಲಿ ಸುಮಾರು 64 ವರ್ಷ ಹಾರ್ಮೋನಿಯಂ ವಾದಕರಾಗಿ ಸೇವೆ ಸಲ್ಲಿಸಿದ ಬಸವರಾಜಯ್ಯಸ್ವಾಮಿ ಅಪ್ಪಟ ಗ್ರಾಮೀಣ ರಂಗ ಕಲಾವಿದರು. 76 ವರ್ಷದ ಬಸವರಾಜಯ್ಯ ಕೇವಲ 10ನೇ ತರಗತಿಯನ್ನು ಮಾತ್ರ ಅಭ್ಯಾಸ ಮಾಡಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಪ್ರಶಸ್ತಿ ಪ್ರದಾನ ಮಾಡಿದರು. ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳದ ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಪುರಸ್ಕೃತರ ಕುರಿತು ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮಾತನಾಡಿದರು. ಸಮಾರಂಭದಲ್ಲಿ ಸುಭದ್ರಾದೇವಿ ಎಸ್.ಜಂಗಮಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ರಂಗಕರ್ಮಿ ಶಾಂತಾ ಕುಲಕರ್ಣಿ ರಾಯಚೂರು ಮತ್ತು ಸಂಗೀತ ಪ್ರಾಧ್ಯಾಪಕಿ ಲಕ್ಷ್ಮೀ ಶಂಕರ ಜೋಶಿ ಗುಲ್ಬರ್ಗ ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರಭಾಕರ ಸಾತಖೇಡ ಸೇರಿದಂತೆ ಹಲವಾರು ರಂಗಕರ್ಮಿಗಳನ್ನು ಸತ್ಕರಿಸಲಾಯ್ತು.


ಬುದ್ಧಿಜೀವಿಗಳೇ ನಮ್ಮನ್ನು ತಿದ್ದಬೇಕಲ್ಲವಾ?


ವೃತ್ತಿ ರಂಗಭೂಮಿಯಲ್ಲಿನ ನಾಟಕಗಳಲ್ಲಿ ದ್ವಂದ್ವಾರ್ಥವಿದೆ. ಅದು ಹಾಸ್ಯ ಕಲಾವಿದರು ಬಳಸುವ ಸಂದರ್ಭವನ್ನವಲಂಬಿಸುತ್ತದೆ. ಕಲಾವಿದ ದ್ವಂದ್ವ ಪದ ಬಳಕೆಯಲ್ಲಿ ಸಭಿಕರ ಕರತಾಡನ ಪಡೆದಲ್ಲಿ ಅದನ್ನೇ ಬಳಸಲು ಮುಂದಾಗುತ್ತಾನೆ. ಆಗ ಇಂತಹ ಪದಗಳ ಬಳಕೆ ಹೆಚ್ಚುತ್ತದೆ. ಇದು ತಪ್ಪು ಎಂದು ಬುದ್ಧಿಜೀವಿಗಳೇ ಅಲ್ಲವೇ ನಮಗೆ ತಿದ್ದಬೇಕು. ಅದನ್ನು ಬಿಟ್ಟು ಕೀಳಾಗಿ ಕಾಣೋದು ಸರಿಯಲ್ಲ ಎಂದು ಶೇಖ್ ಮಾಸ್ಟರ್ ನುಡಿದರು. ವೃತ್ತಿ ರಂಗಭೂಮಿಯವರು ಅಶ್ಲೀಲ ಪದಗಳ ಪ್ರಯೋಗವನ್ನು ಸಭಿಕರ ಮೂಡ್ ಗಮನಿಸಿ ಕೆಲ ಪದಗಳ ಬಳಸುತ್ತಾರೆಯೇ ವಿನಹ ಇಂತಹ ಪದಗಳ ಬಳಕೆ ವೃತ್ತಿ ರಂಗಭೂಮಿ ಇಲ್ಲವೇ ಇಲ್ಲ. ಅನೇಕ ಬಾರಿ ಮನೆಯಲ್ಲಿಯೂ ಕೆಲವು ದ್ವಂದ್ವ ಪದಗಳ ಬಳಕೆಯಾಗುತ್ತದೆ. ಹಾಗಂತ ಮನೆಯೇ ಅಶ್ಲೀಲ ಅಂತ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.



ಶೇಖ್ ಮಾಸ್ತರ್ ಗರಂ ಆಗಿದ್ದೇಕೆ?


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರೀಯ ವಿವಿ ಮೌಲ್ಯಮಾಪನ ಕುಲಸಚಿವ ಚಂದ್ರಕಾಂತ ಡೋಣೂರ್ ತಮ್ಮ ಮಾತುಗಳಲ್ಲಿ ಕಂಬಾರ, ಕಾರ್ನಾಡರ ಹೆಸರು ಪ್ರಸ್ತಾಪಿಸಿದ್ದೇ ಶೇಖ್ ಮಾಸ್ತರ್ ಜ್ಞಾನಪೀಠಿಗಳ ಬಗ್ಗೆ ಗರಂ ಆಗುವಂತಾಯ್ತು. ಕನ್ನಡ ವೃತ್ತಿ ರಂಗಭೂಮಿ ತುಂಬ ಸಿರಿವಂತವಾಗಿದ್ದರೂ ಜ್ಞಾನಪೀಠಿಗಳು ಯಾಕೋ ಈ ರಂಗದತ್ತ ಕಡೆಗಣ್ಣನೋಟವನ್ನೇ ಹರಿಸುತ್ತಿದ್ದಾರೆಂದು ಕಳವಳ ಹೊರಹಾಕಿದರು


ಚೌಕಟ್ಟು ಮೆಟ್ಟಿ ನಿಂತು ಕಲಾವಿದರಿಗೆ ಬೆಂಬಲಿಸುವೆ


ನಾನು ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಕೆಲಸ ಶುರು ಮಾಡಿಲ್ಲ. ರಜಿಸ್ಟ್ರಾರ್ ಕೊರತೆ, ಚುನಾವಣೆ ನೀತಿ ಸಂಹಿತೆ ಎಂದು ಅಡಚಣೆ ಕಂಡಿದ್ದವು. ಇದೀಗ ಎಲ್ಲವೂ ಸುರಳಿತವಾಗಿದೆ. ಏಣಗಿ ಬಾಳಪ್ಪನವರ ಕಾರ್ಯಕ್ರಮದೊಂದಿಗೆ ಶುಭಾರಂಭವಾಗಿದೆ. ಬರುವ ದಿನಗಳಲ್ಲಿ ಸರ್ಕಾರದ ಕಟ್ಟು- ಚೌಕಟ್ಟು ಮೀರಿ ಕಲಾವಿದರಿಗೆ, ರಂಗಭೂಮಿಗೆ ನೆರವಾಗುವಂತಹ ಎಲ್ಲ ತರಹದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವೆ ಎಂದರು. ಅಕಾಡೆಮಿ ಈವರೆಗೂ ಕೇವಲ 15 ಪುರಸ್ಕಾರ ನೀಡುತ್ತ ಹೊರಟಿದೆ. ಇದನ್ನು 30ಕ್ಕೆ ಹೆಚ್ಚಿಸುವ ಗುರಿ ತಮ್ಮದು. ಜೊತೆಗೇ ಪುರಸ್ಕಾರದ ಮೊತ್ತವನ್ನೂ ಹೆಚ್ಚಿಸಬೇಕೆಂದು ಸಂಸ್ಕೃತಿ ಸಚಿವೆ ಉಮಾಶ್ರೀ ಅವರನ್ನು ಕೋರಿದ್ದಾಗಿ ಶೇಖ್ ಮಾಸ್ಟರ್ ನುಡಿದರು. ಕಲಾವಿದರಿಗೂ ಅಕಾಡೆಮಿ ಗೌರವಿಸುವ ಯೋಜನೆ ಹಾಕುವೆ. ಹೈ-ಕ ಭಾಗದ ರೊಟ್ಟಿ- ಚಟ್ನಿ ತಿಂದು ಬೆಳೆದವರು ತಾವು. ಅಕಾಡೆಮಿಯಿಂದ ಸಲ್ಲುವ ಪ್ರೋತ್ಸಾಹ ಒದಗಿಸಿವುದಾಗಿಯೂ ಭರವಸೆ ನೀಡಿದರು.

ಗುಲ್ಬರ್ಗದಲ್ಲೇ ಪುರಸ್ಕಾರ ಪ್ರದಾನ


2013- 14ನೇ ಸಾಲಿನ ಅಕಾಡೆಮಿ ಪುರಸ್ಕಾರ ಪ್ರದಾನ ಪ್ರಕ್ರಿಯೆ ಶುರುವಾಗಬೇಕಿದೆ. ಸಮಾರಂಭವನ್ನು ಗುಲ್ಬರ್ಗದಲ್ಲೇ ವಿಜೃಂಭಣೆಯಿಂದ ನಡೆಸುವ ಯೋಜನೆ ತಮ್ಮದು ಎಂದ ಶೇಖ್ ಮಾಸ್ತರ್, ಗುಲ್ಬರ್ಗ ಭಾಗದ ಜನ ರಂಗಭೂಮಿಯನ್ನು ತುಂಬ ಪ್ರೀತಿಯಿಂದ ಕಾಣುತ್ತಾರೆಂದು ಮೆಚ್ಚುಗೆಯಿಂದ ನುಡಿದರು. ಸಮಾರಂಭದಲ್ಲಿ ಕೇಂದ್ರೀಯ ವಿವಿ ಮಲ್ಯಮಾಪನ ಕುಲಸಚಿವ ಚಂದ್ರಕಾಂತ ಡೋಣೂರ್ ಮಾತನಾಡಿದ ರಂಗಭೂಮಿಯೊಂದೇ ಕ್ಷಣಾರ್ಧದಲ್ಲಿ ಸಾವಿರಾರು ಜನರಿಗೆ ಪರಿಣಾಮಕಾರಿ ಸಂದೇಶ ಸಾರುವ ಮಾಧ್ಯಮ ಎಂದರಲ್ಲದೆ ದೇಶ-ವಿದೇಶಗಳ ರಂಗವನ್ನು ಹೋಲಿಕೆ ಮಾಡುತ್ತ ಭಾರತೀಯ ರಂಗಭೂಮಿ ಮಹತ್ವ, ಮೌಲ್ಯಗಳನ್ನು ವಿವರಿಸಿದರು.


ಉದ್ಯೋಗಿನಿಗೆ ಅರ್ಹರಿಂದ ಅರ್ಜಿ ಆಹ್ವಾನ
ಗುಲ್ಬರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಸಕ್ತ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿ ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆ ಹಾಗೂ ಸೇವಾ ಚಟುವಟಿಕೆ ಕೈಗೊಳ್ಳಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿದಾರರ ವಯಸ್ಸು 18 ರಿಂದ 45ರೊಳಗಿರಬೇಕು. ಆದಾಯ ಮಿತಿ 40,000 ಮೀರಿರಬಾರದು. ಇವರಲ್ಲಿ ಸಂಕಷ್ಟ ಪರಿಸ್ಥಿತಿ, ವಿಕಲಚೇತನ, ವಿಧವಾ ಮಹಿಳೆಯರಿಗೆ ಆದಾಯ ಮಿತಿ ಇಲ್ಲ. ಸೌಲಭ್ಯ ಪಡೆಯಲು ಚಟುವಟಿಕೆಯಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿರಬೇಕು. ಇಲಾಖೆ ಹಾಗೂ ಇತರ ತರಬೇತಿ ಯೋಜನೆಗಳಡಿ ತರಬೇತಿ ಪಡೆದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ವಿಧವೆಯರು, ಸಂಕಷ್ಟಿತ ಮಹಿಳೆಯರು, ವಿಕಲಚೇತನರು, ದೇವದಾಸಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವವರು ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಯೋಜನೆಯಡಿ ಸೌಲಭ್ಯ ಪಡೆಯಲಿಚ್ಚಿಸುವ ಮಹಿಳೆಯರು ಮೇಲ್ಕಂಡ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಆಗಸ್ಟ್ 5ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement