ಎಪಿಎಂಸಿ ಅನಿರ್ದಿಷ್ಟಾವಧಿ ಬಂದ್ ನಾಳೆ
ರಾಯಚೂರು: ಕರ್ನಾಟಕ ಕೃಷಿ ಉತ್ಪನ್ನ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ- 1966ರ ಕಲಂ 72ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಜು.21ರಿಂದ ಎಪಿಎಂಸಿ ಅನಿರ್ದಿಷ್ಟಾವಧಿ ಬಂದ್ ಆಗಲಿದೆ. ಈ ಕುರಿತು ರಾಜೇಂದ್ರ ಗಂಜ್ ವರ್ತಕರ ಸಂಘ ನಿರ್ಧರಿಸಿದ್ದು, ಸಣ್ಣ ವ್ಯಾಪಾರಸ್ಥರು ಹಾಗೂ ರೈತರಿಗೆ ಹೊಸ ತಿದ್ದುಪಡಿ ಮಾರಕವಾಗಲಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲ ಕೃಷಿ ಉತ್ಪನ್ನಗಳ ವ್ಯಾಪಾರ ಇ-ಟ್ರೇಡಿಂಗ್ ಹಾಗೂ ಆನ್ಲೈನ್ ಮೂಲಕ ಹಣವನ್ನು ರೈತರು ಹಾಗೂ ದಲ್ಲಾಳಿಗಳಿಗೆ ವರ್ಗಾಯಿಸುವುದು ಸರಿಯಾದ ಪದ್ಧತಿಯಲ್ಲ. ತೂಕ, ಗಾತ್ರ ಹಾಗೂ ಹಣ ಪಾವತಿಗೆ ಸಂಬಂಧಿಸಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜು.21ರಿಂದ ಎಪಿಎಂಸಿಯ ಎಲ್ಲ ವಹಿವಾಟು ಸ್ಥಗಿತಗೊಳಿಸಿ ಬಂದ್ ಆಚರಿಸಲಾಗುತ್ತಿದೆ. ಇದರಲ್ಲಿ ಜಿನ್ನಿಂಗ್-ಪ್ರೆಸ್ಸಿಂಗ್, ಎಣ್ಣೆ ಹಾಗೂ ಅಕ್ಕಿ ಗಿರಣಿ ಮಾಲೀಕರು ಹಾಗೂ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು ಬೆಂಬಲಿಸಬೇಕು. ಮಾರುಕಟ್ಟೆಗೆ ಯಾವುದೇ ಉತ್ಪನ್ನ ಮಾರಾಟ ಮಾಡಲು ರೈತರು ಸೋಮವಾರದಿಂದ ತರದಂತೆ ಮನವಿ ಮಾಡಿದ್ದಾರೆ.