ಪಡಿತರ ವ್ಯವಸ್ಥೆ ಕುರಿತು ಜಾಗೃತಿ ಶಿಬಿರ
ರಾಯಚೂರು: ನಗರದ ಸ್ಪಂದನಾ ಸಭಾಂಗಣದಲ್ಲಿ ಇತ್ತೀಚೆಗೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ರಾಜೀವ್ ಆವಾಸ್ ಯೋಜನೆ ಹಾಗೂ ಪಡಿತರ ವ್ಯವಸ್ಥೆಯ ಜಾಗೃತಿ ಶಿಬಿರ ಆಯೋಜಿಸಿತ್ತು. ಶಿಬಿರವನ್ನು ಸಾಮಾಜಿಕ ಪರಿವರ್ತನಾ ಜನಾಂದೋಲನಾ ಸಂಘಟನೆ ರಾಜ್ಯಾಧ್ಯಕ್ಷ ಜೆ.ಬಿ. ರಾಜು ಉದ್ಘಾಟಿಸಿ ರಾಜ್ಯದಲ್ಲಿ ಬಡವರಿಗೆ ರೂಪಿಸಿ ಜಾರಿಗೆ ತಂದಿರುವ ಬಹುತೇಕ ಯೋಜನೆಗಳ ಲಾಭ ಬಡವರಿಗೆ ದೊರೆಯುತ್ತಿಲ್ಲ. ವಸತಿ ಯೋಜನೆಯಡಿ ಮನೆಗಳು ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಸ್ಲಂ ಜನರಲ್ಲಿ ಪಡಿತರ ವಿಷಯಕ್ಕೆ ಸಂಬಂಧಿಸಿ ಅನಗತ್ಯ ಗೊಂದಲ ಹುಟ್ಟುಹಾಕಲಾಗುತ್ತಿದೆ ಎಂದು ಆರೋಪಿಸಿದರು. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಚಂದ್ರಶೇಖರ್ ಯಕ್ಲಾಸಪುರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಬಣ್ಣ ಅರೋಲಿಕರ್, ಮಹಿಳಾ ಸಂಯೋಜಕಿ ರೆಹನಾ ಸುಲ್ತಾನ್, ಎಸ್.ಹುಲಿಗೆಪ್ಪ, ವೆಂಕಟೇಶ್, ಜನಾರ್ದನ ಹಳ್ಳಿಬೆಂಚಿ, ಅನಿಲ್ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.