ಹರವಾಳ ಗ್ರಾಪಂ ಪೀಠೋಪಕರಣ ಬೀದಿಗೆ
ಗುಲ್ಬರ್ಗ: ಕಳೆದೊಂದು ತಿಂಗಳಿಂದಲೂ ಹರವಾಳ ಗ್ರಾಪಂನಲ್ಲಿ ನಡೆದಿದ್ದ ಖಾತ್ರಿ ಯೋಜನೆ ಕೂಲಿ ಹಣ ಪಾವತಿಗೆ ಆಗ್ರಹಿಸಿದ್ದ ಕಾರ್ಮಿಕರ ಧರಣಿ ವಿಕೋಪಕ್ಕೆ ಹೋಗಿದ್ದು, ಯಾರೂ ತಮ್ಮ ಬೇಡಿಕೆ ಈಡೇರಿಸುತ್ತಿಲ್ಲವೆಂದು ಕೋಪದಲ್ಲಿ ಕಾರ್ಮಿಕರು ಪಂಚಾಯ್ತಿಯಲ್ಲಿನ ಪೀಠೋಪಕರಣಗಳನ್ನು ಬೀದಿಗೆ ಎಸೆದಿದ್ದಾರೆ. 2013-14ನೇ ಸಾಲಿನ ಖಾತ್ರಿ ಯೋಜನೆ ಹಣ ಪಾವತಿಯಾಗಿಲ್ಲವೆಂಬುದು ಕಾರ್ಮಿಕರ ಬೇಡಿಕೆ. ಇದನ್ನೇ ಮುಂದಿಟ್ಟುಕೊಂಡು ಅವರು ಹೋರಾಟ ಆರಂಭಿಸಿದ್ದರು. ಭಜನೆ ಮಾಡಿ ಗಮನ ಸೆಳೆದಿದ್ದರು. ತಿಂಗಳ ಪರ್ಯಂತ ಧರಣಿ ನಡೆದರೂ ಕೇಳುವವರಿಲ್ಲವೆಂದು ಕೋಪದಲ್ಲಿ ಈ ಕೆಲಸ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿನ ಪಿಡಿಒ ಪಂಚಾಯ್ತಿಯತ್ತ ಸುಳಿದಿಲ್ಲ. 5ನೇ ಹಣಕಾಸು ಅನುದಾನದಲ್ಲಿಯೂ ಅವ್ಯವಹಾರವಾಗಿದೆ ಎಂದರೂ ಕೇಳುವವರಿಲ್ಲ, ಕೂಲಿ ಹಣ ಕೊಡಲಿಕ್ಕೂ ಸಿದ್ಧರಿಲ್ಲ. ಇವೆಲ್ಲ ಕಾರಣಗಳಿಂದ ಪೀಠೋಪಕರಣ ಬೀದಿಗೆ ಎಸೆದು ಕಾರ್ಮಿಕರು ಕೋಪ ಪ್ರದರ್ಶಿಸಿದ್ದಾಗಿ ಹೇಳಿದ್ದಾರೆ.