ಫಲಾನುಭವಿಗಳ ಆಯ್ಕೆಗೆ ಗ್ರಾಪಂ ವಾರ್ಡ್ ಸಭೆ
ಮುದಗಲ್: ಸಮೀಪದ ನಾಗಲಾಪುರ ಗ್ರಾ.ಪಂ.ನಲ್ಲಿ ಇಂದಿರಾ ಆವಾಸ್ ಮನೆಗಳ ಕುರಿತು ವಾರ್ಡ್ ಮಟ್ಟದ ಸಭೆ ನಡೆಸಲಾಯಿತು.
2014-15ನೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆಯಡಿ 43 ಮನೆಗಳು ಮಂಜೂರಾಗಿದ್ದು, ಗ್ರಾಮಸಭೆ ನಡೆಸುವ ಮೂಲಕ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ. ಆದ್ದರಿಂದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ತೊಡಕಿ, ಕುಮಾರ ಖೇಡ, ಛತ್ತರ, ಹೆಗ್ಗಾಪುರ, ವ್ಯಾಕರನಾಳ, ಉಳಿಮೇಶ್ವರ, ಪಿಕಳಿಹಾಳ ಹಾಗೂ ನಾಗಲಾಪುರ ಗ್ರಾಮಗಳಲ್ಲಿ ವಾರ್ಡ್ ಸಭೆ ನಡೆಸಲಾಯಿತು.
ಸಭೆಯಲ್ಲಿ ಪಿಡಿಒ ಚನ್ನಮಲ್ಲಯ್ಯ ಸ್ವಾಮಿ ಮಾತನಾಡಿ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 43 ಮನೆಗಳು ಮಂಜೂರಾಗಿದ್ದು, ಎಸ್‌ಸಿ- 15, ಎಸ್‌ಟಿ- 22, ಜನರಲ್- 3, ಅಲ್ಪಸಂಖ್ಯಾತರಿಗೆ- 3 ಮನೆಗಳನ್ನು ಜನಸಂಖ್ಯೆ ಆಧರಿಸಿ ವರ್ಗೀಕರಣ ಮಾಡಲಾಗಿದೆ.
ಗ್ರಾಮಸಭೆಯ ಮೂಲಕ ಕಡುಬಡವರಿಗೆ, ವಸತಿ ಯೋಜನೆಯಿಂದ ವಂಚಿತರಿಗೆ ಮನೆಗಳನ್ನು ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಜನಸಾಮಾನ್ಯರು ವಾರ್ಡ್ ಸಭೆಯಲ್ಲಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಸಭೆಯಿಂದ ದೂರ ಉಳಿದ ಸದಸ್ಯರು: ಪ್ರತಿ ಗ್ರಾಮದ ವಾರ್ಡ್ ಸಭೆಯಲ್ಲಿ ಆಯಾ ಭಾಗದ ಗ್ರಾಪಂ ಸದಸ್ಯರು ಅಧ್ಯಕ್ಷತೆ ವಹಿಸಬೇಕು. ಆದರೆ ನಾಗಲಾಪುರ, ಕುಮಾರಖೇಡ, ಉಳಿಮೇಶ್ವರ, ತೊಡಕಿ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಕಡೆ ಗ್ರಾಪಂ ಸದಸ್ಯರೇ ಕಾಣಲಿಲ್ಲ. ಗ್ರಾಪಂ ಸದಸ್ಯರನ್ನು ಸಭೆಗೆ ಹಾಜರಾಗುವಂತೆ ವ್ಯಾಕರನಾಳ ಗ್ರಾಮದಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ವಾಗ್ಯುದ್ಧ ನಡೆಸಿದ ಪ್ರಸಂಗ ಜರುಗಿತು. ನಂತರ ಪಿಡಿಒ ಚನ್ನಮಲ್ಲಯ್ಯ ಮಾತನಾಡಿ, ಸದಸ್ಯರಿಗೆ ವಾರ್ಡ್ ಸಭೆ ನಡೆಸುವ ಬಗ್ಗೆ 7 ದಿನ ಮುಂಚಿತವಾಗಿ ನೋಟಿಸ್ ನೀಡಲಾಗಿದೆ. ಸಭೆಗೆ ಹಾಜರಾಗುವುದು ಅವರ ಜವಾಬ್ದಾರಿ ಎಂದರು.
ನೋಡಲ್ ಅಧಿಕಾರಿಯಾಗಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಂಗಣ್ಣ, ವಸತಿ ಯೋಜನೆಯ ನೋಡಲ್ ಅಧಿಕಾರಿ ಶಂಕರ ಪವಾರ್, ಗ್ರಾಪಂ ಅಧ್ಯಕ್ಷೆ ಅನುಸೂಯ ಗ್ಯಾನನಗೌಡ, ಸೋಮಶೇಖರ ಪೂಜಾರಿ, ಬಾಲಪ್ಪ, ಬಾಲಮ್ಮ, ಚೌಡಮ್ಮ, ಶಂಕ್ರಪ್ಪ ತೊಡಕಿ, ಹನುಮಪ್ಪ, ಶಾಂತಮ್ಮ ಉಳಿಮೇಶ್ವರ, ಲೆಕ್ಕಾಧಿಕಾರಿ ಮಲ್ಲಿಕಾರ್ಜುನ, ಗಣಕಯಂತ್ರ ನಿರ್ವಾಹಕ ನೀರುಪಾದಿ ಹಾಜರಿದ್ದರು.