ಸರ್ಕಾರ ರೈತರ ನೆರವಿಗೆ ಧಾವಿಸಲಿ: ಶಿವಾಚಾರ್ಯ ಶ್ರೀ
ಸಿಂಧನೂರು: ರಾಜ್ಯಾದ್ಯಂತ ಬರಗಾಲ ಛಾಯೆ ಹರಡಿದ್ದು, ಸರ್ಕಾರ ಆದಷ್ಟು ಶೀಘ್ರದಲ್ಲಿ ರೈತರ ನೆರವಿಗೆ ಬರಬೇಕು ಎಂದು ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಶ್ರೀಗಳು ಒತ್ತಾಯಿಸಿದರು. ಪಟ್ಟಣದ ವಳಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ಹಮ್ಮಿಕೊಂಡಿದ್ದ ಸಪ್ತಭಜನೆಯ ಮಹಾಮಂಗಲ ಪೂಜೆಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ರೈತರು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಇದ್ದರೆ ಮಾನವ ಕುಲವೇ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ರೈತ ಸಮುದಾಯವನ್ನು ಅಲಕ್ಷಿಸಬಾರದೆಂದು ಸ್ವಾಮೀಜಿ ಕಿವಿಮಾತು ಹೇಳಿದರು. ಕಲ್ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಮುಖಂಡ ಕೊಲ್ಲಾಶೇಷಗಿರಿರಾವ್, ನ.ಯೋ.ಪ್ರಾ. ಮಾಜಿ ಅಧ್ಯಕ್ಷ ಎಸ್. ಶಿವನಗೌಡ ಗೊರೇಬಾಳ, ಮಧ್ವರಾಜಾಚಾರ್ಯ, ಚನ್ನನಗೌಡ ಮೇಟಿ, ಅಶೋಕಗೌಡ ಗದ್ರಟಗಿ, ಚಂದ್ರಶೇಖರ್ ಮೈಲಾರ್, ಶಂಕರಗೌಡ ಮತ್ತಿತರರು ಉಪಸ್ಥಿತರಿದ್ದರು.