ಮಾಧ್ಯಮದ ದೃಷ್ಟಿಕೋನ ಬದಲಾಗಲಿ: ರವೀಂದ್ರ ರೇಷ್ಮೆ
ಲಿಂಗಸ್ಗೂರು: ಸಾರ್ವಜನಿಕರಿಗೆ ಸುದ್ದಿ ನೀಡುವ ಭರಾಟೆಯಲ್ಲಿ ಅನೇಕ ಎಡವಟ್ಟುಗಳು ಜರುಗುತ್ತಿದ್ದು, ಪ್ರಸ್ತುತ ದಿನಮಾನಗಳಲ್ಲಿ ಮಾಧ್ಯಮಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಪ್ರೊ. ರವೀಂದ್ರ ರೇಷ್ಮೆ ಅಭಿಪ್ರಾಯಪಟ್ಟರು.
ಪಟ್ಟಣದ ಪದವಿ ಪೂರ್ವ ಕಾಲೇಜು ಒಳಾವರಣದಲ್ಲಿ ಲಿಂಗಸ್ಗೂರು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಾಗತೀಕರಣದ ಫಲವಾಗಿ ದೇಶದ ಜನರ ಬೌದ್ಧಿಕ ಶಕ್ತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುತ್ತಿವೆ. ಅನೇಕ ಯುವ ಪ್ರತಿಭೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿವೆ. ಜಾಗತೀಕರಣದ ಕುರಿತು ಸಾಧಕ- ಬಾಧಕಗಳ ಕುರಿತು ವಿಸ್ತೃತ ಚರ್ಚೆಗಳಾಗಬೇಕಿದ್ದು, ಇದಕ್ಕೆ ಮಾಧ್ಯಮ ಕ್ಷೇತ್ರ ವೇದಿಕೆಯಾಗಬೇಕಿದೆ ಎಂದರು.
ರಾಜಕಾರಣಿಗಳು ಎಚ್ಚೆತ್ತುಕೊಳ್ಳಲಿ: ರಾಜಕಾರಣಿಗಳ ಮಾತು, ಕೃತಿ ಬದಾವಣೆಯಾದ ಪ್ರಯುಕ್ತ ಜನಸಾಮಾನ್ಯರ ಮೇಲಿನ ವಿಶ್ವಾಸ ಕಳೆದುಕೊಳ್ಳುವ ದುಸ್ಥಿತಿಗೆ ಬಂದಿದೆ. ಜನರ ನಾಡಿಮಿಡಿತ ಅರಿತು ಕೆಲಸ ಮಾಡುವ ಹವ್ಯಾಸವನ್ನು ಜನಪ್ರತಿನಿಧಿಗಳು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ದೃಶ್ಯ ಮಾಧ್ಯಮದಲ್ಲಿ ಅಪರಾಧ ಪ್ರಕರಣಗಳನ್ನು ವೈಭವೀಕರಿಸಲಾಗುತ್ತಿದೆ. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಾಗರಿಕ ಸಮಾಜದಲ್ಲಿ ದುಷ್ಕೃತ್ಯಗಳು ಸಾಮಾನ್ಯ. ಆದರೆ ಸರ್ಕಾರ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಸರ್ವ ಪ್ರಯತ್ನ ನಡೆಸಬೇಕಿದೆ. ಅತ್ಯಾಚಾರ ಘಟನೆಗಳ ಬಗ್ಗೆ ಮಾಧ್ಯಮದಲ್ಲಿ ಅತೀ ರಂಜಿತವಾಗಿ ಬಿಂಬಿಸುವ ಮೂಲಕ ಜನರಲ್ಲಿ ಭೀತಿ ಮೂಡಿಸಲು ಕಾರಣವಾಗುತ್ತಿವೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರಗೆ ದೋ-ಆಬ್ ಪತ್ರಿಕಾ ರಂಗದ ಭೀಷ್ಮ-2014 ಹಾಗೂ ವರದಿಗಾರರಾದ ನಾಗರಾಜಾ ಗೊರೇಬಾಳ, ಬಸವರಾಜ ಬ್ಯಾಗವಾಟ್, ಇನಾಯತ್ ಪಾಶಾ ಜಾಲಿಹಾಳ, ವಿರುಪಾಕ್ಷಿಗೌಡ ಸಿರವಾರ ಸೇರಿದಂತೆ ಐವರಿಗೆ ದೇವನಾಂಪ್ರೀಯ-2014 ಪ್ರಶಸ್ತಿ ಮತ್ತು ಪ್ರಸಾರಂಗ ವಿಭಾಗದ ಮುರಳೀಧರ ವೈದ್ಯ, ಪತ್ರಿಕಾ ವಿತರಕರಾದ ಮಲ್ಲೇಶ ಜಾಲಹಳ್ಳಿ, ಸಂಗಪ್ಪ ಕೊಡೇಕಲ್, ಪ್ರಶಾಂತ ಹಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಶಾಸಕ ಮಾನಪ್ಪ ವಜ್ಜಲ್, ಜಿಪಂ ಅಧ್ಯಕ್ಷೆ ಸರೋಜಮ್ಮ ದಡೇಸಗೂರು, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಪ್ರೆಸ್‌ಕ್ಲಬ್ ಜಿಲ್ಲಾಧ್ಯಕ್ಷ ಭೀಮರಾಜ ಹದ್ದಿನಾಳ, ತಾಲೂಕಾಧ್ಯಕ್ಷ ಶಿವರಾಜ ಕೆಂಭಾವಿ, ಖಾನ್‌ಸಾಬ ಮೋಯಿನ್, ರಾಮು ನಾಯಕ, ಸೋಮು ನಾಯಕ ಸೇರಿದಂತೆ ಉಪಸ್ಥಿತರಿದ್ದರು.