ಬಸ್ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ದೇವದುರ್ಗ: ತಾಲೂಕಿನ ಬಾಗೂರು ಹಾಗೂ ಮೇದಿನಾಪುರ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹ್ಮದ ಮುಸ್ತಾಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ದೇವದುರ್ಗ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ತಾಲೂಕಿನ ಬಾಗೂರು ಹಾಗೂ ಮೇದಿನಾಪುರ ಗ್ರಾಮಗಳಿಂದ ಪ್ರತಿ ದಿನ 50ರಿಂದ 100 ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಪಟ್ಟಣ ಪ್ರದೇಶಗಳಿಗೆ ವಿದ್ಯಾಭ್ಯಾಸ ಮಾಡಲು ತೆರಳುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ ಬಾರದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆಂದು ದೂರಿದರು.
ಎರಡು ಗ್ರಾಮಗಳಿಂದ ಬಾಲಕಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಪಟ್ಟಣಕ್ಕೆ ತೆರಳುತ್ತಿದ್ದು, ಶಾಲೆ ವೇಳೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವಿಲ್ಲದೇ ತೊಂದರೆಗೆ ಸಿಲುಕುತ್ತಿದ್ದಾರೆ. ಕಾರಣ ಕೂಡಲೇ ಬಸ್ ಸೌಕರ್ಯ ಒದಗಿಸುವಂತೆ ಎಸ್‌ಎಫ್‌ಐ ತಾಲೂಕು ಸಮಿತಿ ಅಧ್ಯಕ್ಷ ಮಹ್ಮದ್ ಮುಸ್ತಾಫ್, ಕಾರ್ಯದರ್ಶಿ ಹನುಮಂತಿ ಸೇರಿ ಅನೇಕರಿದ್ದರು.