ಗುಡಿಹಾಳ ಎಎನ್ಎಂ ಕಟ್ಟಡ ಅನೈತಿಕ ಚಟುವಟಿಕೆ ತಾಣ
ಕ.ಪ್ರ. ವಾರ್ತೆ ಮುದಗಲ್ ಜು. 23
ಸಮೀಪದ ಗುಡಿಹಾಳ ಗ್ರಾಮದಲ್ಲಿರುವ ಎಎನ್ಎಂ(ಸಹಾಯಕ ಶುಶ್ರೂಷಕರು) ಕಟ್ಟಡ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಸೇವೆಯಿಂದ ದೂರ ಉಳಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅನೇಕ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಜನರಿಗೆ ತುರ್ತು ಚಿಕಿತ್ಸೆ ಮತ್ತು ಗರ್ಭಿಣಿಯರಿಗೆ, ಬಾಣಂತಿಯರಿಗೆ ಅನುಕೂಲವಾಗಲೇಂದು ಸರ್ಕಾರ ಲಕ್ಷಾಂತರ ರು. ವೆಚ್ಚ ಮಾಡಿ ಎಎನ್ಎಂ ಕಟ್ಟಡ ನಿರ್ಮಾಣ ಮಾಡಿ ಒಬ್ಬರು ನರ್ಸ್ ನೇಮಕ ಮಾಡಿದೆ. ಆದರೆ ಇಲ್ಲಿ ಯಾರೂ ವಾಸವಿರದ ಕಾರಣ ಕಟ್ಟಡ ಸಂಪೂರ್ಣಪುಢಾರಿಗಳ ತಾಣವಾಗಿದೆ.
ಕಟ್ಟಡದ ಮುಂಭಾಗದಲ್ಲೇ ಜಾನುವಾರುಗಳನ್ನು ಕಟ್ಟುತ್ತಿರುವ ಕಾರಣ ಕೊಟ್ಟಿಗೆಯಾಗಿದೆ. ರಾತ್ರಿ ವೇಳೆ ಕುಡುಕರ ತಾಣವಾಗಿದೆ. ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲಿಗಳು ತುಂಬಿಕೊಂಡಿವೆ. ಪಡ್ಡೆ ಹೈಕಳು ಇಲ್ಲಿಯೇ ಇಸ್ಪೀಟ್ ಆಡುತ್ತಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಗೆ ಸೇರಿರುವ ಈ ಕಟ್ಟಡ ಈಗ ಸಂಪೂರ್ಣ ಪಾಳು ಬಿದ್ದಿದೆ.
ಸಂಪೂರ್ಣ ನಿರ್ಲಕ್ಷ್ಯ: ತುರ್ತು ಚಿಕಿತ್ಸೆಗೆ ಬೇಕಾಗುವ ಸಾಮಗ್ರಿ, ಕುರ್ಚಿ, ಟೇಬಲ್ಗಳು, ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ಸೌಲಭ್ಯವನ್ನು ನೀಡಿತ್ತಾದರೂ ಬಳಕೆಯಿಲ್ಲದೆ ಇಟ್ಟಲ್ಲೇ ಕೊಳೆತು ಹೋಗಿವೆ. ಗ್ರಾಮೀಣ ಪ್ರದೇಶದ ಜನರು ದೊಡ್ಡ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲಿ ಜೀವಕ್ಕೆ ಅಪಾಯವಾಗದಂತೆ ಮುಂಜಾಗ್ರತೆಯಾಗಿ ಇಲ್ಲಿ ಚಿಕಿತ್ಸೆ ನೀಡಬೇಕು. ಆದರೆ ಗ್ರಾಮಕ್ಕೆ ನೇಮಕಗೊಂಡಿರುವ ನರ್ಸ್ಗಳು ಪಟ್ಟಣದಲ್ಲೇ ವಾಸವಾಗಿದ್ದರಿಂದ ಕಟ್ಟಡದ ಬಗ್ಗೆ ಕಾಳಜಿ ವಹಿಸುವವರೇ ಇಲ್ಲದಂತಾಗಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೇಂದು ಗ್ರಾಮೀಣ ಪ್ರದೇಶಗಳಲ್ಲಿ ಇಂತ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಪುಂಡ ಪೋಕರಿಗಳ ತಾಣವಾಗಿದೆ. ಇವುಗಳ ರಕ್ಷಣೆ ಮಾಡುವವರಾರು ಎನ್ನುವ ಪ್ರಶ್ನೆಗೆ ಆರೋಗ್ಯ ಇಲಾಖೆ ಉತ್ತರ ನೀಡಬೇಕಾಗಿದೆ.