ನಿಡಿಗೋಳ ಗ್ರಾಮದ ಭೂ ಹಂಚಿಕೆ ಹೋರಾಟ ಐದನೇ ದಿನಕ್ಕೆ
ಸಿಂಧನೂರು: ತಾಲೂಕಿನ ನಿಡಿಗೋಳ ಗ್ರಾಮದ ಸರ್ವೆ ನಂ.15ರ ವ್ಯಾಪ್ತಿಯಲ್ಲಿನ ಭೂಮಿ ಹಂಚಿಕೆ ಸಮಸ್ಯೆಯನ್ನು ಪರಿಹರಿಸಿ ದಲಿತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆರ್ವೈಎಫ್ಐ, ಕೆಆರ್ಎಸ್ ಹಾಗೂ ಟಿಯುಸಿಐ ಜಂಟಿ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿರುವ ಆಹೋರಾತ್ರಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಮಾತನಾಡಿ, ಮಸ್ಕಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರು, ರೈತ, ಕೂಲಿ ಕಾರ್ಮಿಕ ಮತ್ತು ದಲಿತರನ್ನು ಓಲೈಸಿ ಮತ ಪಡೆಯುತ್ತಾರೆ. ಗೆದ್ದ ಮೇಲೆ ಈ ಜನಾಂಗವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಬಲಿಷ್ಠರ ಪರವಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು. 20 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಸ್ಸಾಪುರ ಇ.ಜೆ. ಗ್ರಾಮದ ದಲಿತರು ಭೂ ಸಮಸ್ಯೆ ಪರಿಹರಿಸಲು ಹಂಪನಗೌಡರ ಹತ್ತಿರ ಹತ್ತಾರು ಬಾರಿ ಅಲೆದಾಡಿದರೂ ಸ್ಪಂದಿಸಿಲ್ಲ. ತಿಡಿಗೋಳ, ನೀಡಿಗೋಳ ಗ್ರಾಮದ ಜನರು ಮಸ್ಕಿ ಶಾಸಕರನ್ನು ಭೇಟಿಯಾಗಲು ಹಗಲು ರಾತ್ರಿ ಕಾದರೂ, ಭೇಟಿಯಾಗದೇ ತಪ್ಪಿಸಿಕೊಂಡಿದ್ದಾರೆ ಎಂದು ದೂರಿದರು. ಧರಣಿಗೆ ಬೆಂಬಲಿಸಿ ಮಾತನಾಡಿದ ಕೊಪ್ಪಳ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಬಡವರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಸರ್ಕಾರ ಈ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡದೆ ಆದಷ್ಟು ಬೇಗ ಪರಿಹರಿಸಬೇಕು. ಬಡವರ ಬೇಡಿಕೆಗಳು ಹೋರಾಟದಿಂದ ಮಾತ್ರ ಬಗೆಹರಿಯುತ್ತವೆ ಎಂದರು.