ಸೇತುವೆ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ
ಸಿಂಧನೂರು: ಗ್ರಾಮೀಣ ಭಾಗಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಶ್ರಮಿಸುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.
ನಬಾರ್ಡ್ ಯೋಜನೆಯಡಿ 50 ಲಕ್ಷ ವೆಚ್ಚದಲ್ಲಿ ತಾಲೂಕಿನ ಸಾಲಗುಂದಾ ಸಮೀಪದ ಬೂದಿಹಾಳ ರಸ್ತೆಯಲ್ಲಿನ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ, ಎಸ್.ಇ.ಪಿ., ಟಿ.ಎಸ್.ಪಿ. ಯೋಜನೆಯಡಿ 2 ಲಕ್ಷದಲ್ಲಿ ಸಮುದಾಯ ಭವನ ನಿರ್ಮಾಣ, ಆರಾಧನ ಸಮಿತಿಯಿಂದ 4.50 ಲಕ್ಷದಲ್ಲಿ ಈರಣ್ಣ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಚಾಲನೆ ಹಾಗೂ ಜಿಪಂ ಎನ್.ಆರ್.ಡಿ.ಡಬ್ಲ್ಯೂ.ಪಿ. ಯೋಜನೆಯಡಿ 12 ಲಕ್ಷ ವೆಚ್ಚದ ಶುದ್ಧ ನೀರು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲಗುಂದಾ ಗ್ರಾಮದ ಜನತೆ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸೇವೆಗೆ ಒದಗಲಿದೆ. ಅಲ್ಲದೆ ಗ್ರಾಮಕ್ಕೆ ಅಗತ್ಯವಾಗಿರುವ ಶುದ್ಧ ನೀರು, ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಜಿ.ಪಂ ಸದಸ್ಯ ಚಂದೂಸಾಬ್ ಮಳ್ಳೂರು ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರಿ ಪಪೂ ಕಾಲೇಜು ಮಂಜೂರಾತಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಸರೋಜಮ್ಮ ಬಸವರಾಜ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಹುಡಾ, ತಾಪಂ ಸದಸ್ಯ ಗೌರಮ್ಮ ಶರಣಬಸವ ವಕೀಲರು, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಕಾಂಗ್ರೆಸ್ ಮುಖಂಡರಾದ ಅಶೋಕ ಭೂಪಾಲ, ಉಸ್ಮಾನಸಾಬ್, ಈರಪ್ಪ, ಗೋವಿಂದಪ್ಪ, ಪರಿಕಪ್ಪ ದಳಪತಿ, ಜಿಪಂ ಉಪವಿಭಾಗದ ಎಇಇ ಬಿ.ಆರ್. ಗೌಡೂರ್, ಜೆ.ಇ. ಆಂಜನೇಯ ಮತ್ತಿತರರು ಇದ್ದರು.