ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ವಸ್ಥ ಸಮಾಜ ಸೇವಕರಿಗಿಲ್ಲ ಸುವ್ಯವಸ್ಥೆ

Rashmi Kasaragodu
Updated On : 24 Jul 2014, 11:43 am

ಪಂಪಯ್ಯ ಮಠ
ಮುದಗಲ್: ಸ್ವಸ್ಥ, ಸುಭಿಕ್ಷು ಸಮಾಜಕ್ಕಾಗಿ ಸೇವೆಗೈಯುವ ಪೊಲೀಸ್ ಸಿಬ್ಬಂದಿಯೇ ಅವ್ಯವಸ್ಥೆಯ ಕೂಪದಲ್ಲಿ ನರಳುವಂತಾಗಿದೆ.
ಸ್ಥಳಿಯ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ವಸತಿ ಗೃಹಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಮಳೆ ಬಂದರೆ ಗೋಳು ಹೇಳತೀರದು. ಚರಂಡಿಗಳಿಲ್ಲದೆ ಕಾರಣ ನೀರು ಮನೆಗಳ ಸುತ್ತಮುತ್ತಲಿರುವ ತಗ್ಗುಗಳಲ್ಲಿ ನಿಂತು ಹಂದಿಗಳ ಆವಾಸ ಸ್ಥಾನಗಳಾಗಿವೆ.
ವಸತಿ ಸಮುಚ್ಚಯದಲ್ಲಿ ಸಿಸಿ ರಸ್ತೆಗಳ ನಿರ್ಮಾಣ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಗೃಹಗಳು ನಿರ್ಮಾಣ ಗೊಂಡು ಸುಮಾರು 48 ವರ್ಷಗಳು ಕಳೆದರೂ ನಿರ್ವಹಣೆ ಕಂಡಿಲ್ಲ. ಇದರಿಂದ ಗೋಡೆಗಳು ಸುಣ್ಣಬಣ್ಣ ಕಾಣದೆ ಶಿಥಿಲಗೊಂಡಿವೆ. ಹಬ್ಬ ಹರಿದಿನಗಳಲ್ಲಿ ಅನಿವಾರ್ಯವಾಗಿ ಅಲ್ಲಿನ ಪೇದೆಗಳೇ ಸುಣ್ಣಬಣ್ಣ ಹಚ್ಚಲು ಮುಂದಾಗಿರುವ ಉದಾಹರಣೆಗಳೂ ಇವೆ.
ವಸತಿಗೃಹಗಳ ಹಿಂಬದಿಯಲ್ಲಿ ಮಾಂಸದ ಅಂಗಡಿಗಳು ಇರುವುದರಿಂದ ದುರ್ವಾಸನೆ ಬೀರುತ್ತಿದ್ದು, ವಾಸಿಸಲು ತೊಂದರೆಯಾಗಿ, ಹೊರಗಡೆ ಬಾಡಿಗೆ ಮನೆಯಲ್ಲಿ ಕೆಲ ಪೇದೆಗಳು ವಾಸಿಸುತ್ತಿದ್ದಾರೆ.
ಬಾಡಿಗೆ ಮನೆಗಳಲ್ಲಿ ವಾಸ: ಮುದಗಲ್ ಠಾಣೆಯು ಸುಮಾರು 50 ಹಳ್ಳಿಗಳಿಗೆ ಕೇಂದ್ರಬಿಂದುವಾಗಿದ್ದು 1 ಪಿಎಸ್‌ಐ,೤ 2 ಎಎಸ್‌ಐ 7 ಹೆಡ್‌ಕಾನ್ಸ್‌ಟೇಬಲ್, 20 ಪೊಲೀಸ್ ಪೇದೆಗಳನ್ನು ಹೊಂದಿದ್ದು ಕೇವಲ 24 ವಸತಿ ಗೃಹಗಳು ಮಾತ್ರ ಇರುವುದರಿಂದ ಕೆಲ ಪೇದೆಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಕೇವಲ 24 ವಸತಿ ಗೃಹಗಳಿದ್ದು ಇದರಲ್ಲಿ ಇತ್ತೀಚೆಗೆ 8 ಕಟ್ಟಡಗಳನ್ನು ಮಾತ್ರ ನಿರ್ಮಿಸಲಾಗಿದೆ. ಉಳಿದ 16 ವಸತಿ ಗೃಹಗಳು ತೀರಾ ಹಳೆಯ ಕಟ್ಟಡಗಳಾಗಿರುವುದರಿಂದ ದುಸ್ಥಿತಿಯಲ್ಲಿವೆ. ಪ್ರತಿ 5 ವರ್ಷಕ್ಕೊಮ್ಮೆ ವಸತಿ ಗೃಹಗಳ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಯೋಜನೆಗಳು ಸಫಲವಾಗಿಲ್ಲ. ಮಳೆಗಾಲ ಬಂತೆಂದರೆ ಸಾಕು ಪಾತ್ರೆಗಳನ್ನು ಹಿಡಿದು ನೀರು ಹೊರಹಾಕಬೇಕಾದ ದುಸ್ಥಿತಿ ಒದಗಿ ಬಂದಿದೆ.
ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣದ ನೆಪದಲ್ಲಿ ಮೊದಲು ನಿರ್ಮಿಸಿದ್ದ ಕಾಂಪೌಂಡ್‌ನ್ನು ತಾಲೂಕಾಡಳಿತ ಧ್ವಂಸಗೊಳಿಸಿದ ನಂತರ ಕಾಂಪೌಂಡ್ ನಿರ್ಮಾಣಕ್ಕೆ ಇದುವರೆಗೂ ಮುಂದಾಗಿಲ್ಲ.
ಹಂದಿಗಳ ಹಾವಳಿ: ವಸತಿ ಗೃಹಗಳ ಬಳಿಯ ಚರಂಡಿಗಳು ಅವ್ಯವಸ್ಥೆಯಿಂದ ಕೂಡಿದ್ದು ಹಂದಿಗಳು ರಾಜಾರೋಷವಾಗಿ ನುಗ್ಗುತ್ತವೆ. ಕಾಂಪೌಂಡ್ ಇಲ್ಲದಿರುವುದು ಒಂದೆಡೆಯಾದರೆ ಚರಂಡಿ ಅವ್ಯವಸ್ಥೆಯಿಂದಾಗಿ ಹಂದಿಗಳ ಉಪಟಳ ಹೆಚ್ಚಿದ್ದು, ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು ದಿನ ಕಳೆಯುತ್ತಿದ್ದಾರೆ. ಹಂದಿಗಳ ಉಪಟಳದಿಂದಾಗಿ ಮಕ್ಕಳನ್ನು ಆಟವಾಡಲು ಹೊರಗಡೆ ಬಿಡದೆ ಮನೆಯಲ್ಲಿಯೇ ಕೂಡಿ ಹಾಕುವಂತಾಗಿದೆ ಎಂದು ಗೃಹಿಣಿಯರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಔಷಧ ಹಾಗೂ ಡಿಡಿಟಿ ಸಿಂಪರಣೆ ಬಗ್ಗೆ ಪಪಂ ನಿರ್ಲಕ್ಷ್ಯ ತಾಳಿದೆ. ವಿದ್ಯುತ್ ಕಂಬಗಳ ಮೂಲಕ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವೈರ್‌ಗಳು ಕೈಗೆಟುಕುತ್ತಿದ್ದು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಅವಘಡ ಸಂಭವಿಸುವ ಮುನ್ನ ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ.


ಹೊಸ ಕಟ್ಟಡಗಳಿಗೆ ಅಸ್ತು
8 ವಸತಿ ಗೃಹಗಳಿಗೆ ಗ್ರೀನ್ ಮಂಜೂರಾತಿ ದೊರೆತಿದ್ದು ಮುದಗಲ್ ಠಾಣೆಯಲ್ಲಿ ಸ್ಥಳಾವಕಾಶ ಕೊರತೆಯಿಂದಾಗಿ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಮರು ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳ ಆದೇಶಕ್ಕೆ ಕಾಯುಲಾಗುತ್ತಿದೆ. ಪೊಲೀಸ್ ಠಾಣೆ ಕಟ್ಟಡಕ್ಕೂ 65 ಲಕ್ಷ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಟಿ ಸಂಗಮೇಶ ಶಿವಯೋಗಿ, ಪಿಎಸ್‌ಐ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement