ರು.1.14 ಕೋಟಿ ಮೌಲ್ಯದ ಅಕ್ರಮ ಮರಳು ಜಪ್ತಿ
ದೇವದುರ್ಗ: ತಾಲೂಕಿನ ವಿವಿಧೆಡೆ ಶುಕ್ರವಾರ ಅಕ್ರಮ ಮರಳು ಸಂಗ್ರಹಣೆ ಅಡ್ಡೆ ಮೇಲೆ ದಾಳಿ ಮಾಡಿ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸುಮಾರು 1.14 ಕೋಟಿ ಮೌಲ್ಯದ ಅಕ್ರಮ ಮರಳು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಗೂಗಲ್, ಹೇರುಂಡಿ, ಬಾಗೂರು ಸೇರಿ ವಿವಿಧೆಡೆ ಕೃಷ್ಣಾ ನದಿಯಿಂದ ಮೇಲೆತ್ತಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮರಳು ದಾಸ್ತಾನು ಪತ್ತೆ ಮಾಡಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು 1.14 ಕೋಟಿ ಮೊತ್ತದ ಮರಳು ಜಪ್ತಿ ಮಾಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಹೇರುಂಡಿಯಲ್ಲಿ 41 ಲಕ್ಷ, ಬಾಗೂರುನಲ್ಲಿ 21 ಲಕ್ಷ ಮೌಲ್ಯದ ಮರಳು ಸೇರಿ ಒಟ್ಟು 1.14 ಕೋಟಿ ಮೊತ್ತದ ಅಕ್ರಮ ಮರಳು ಸಂಗ್ರಹ ಜಪ್ತಿ ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು 2 ಕೋಟಿ ಅಕ್ರಮ ಮರಳು ಸಂಗ್ರಹ ಪತ್ತೆ ಮಾಡಲಾಗಿದೆ ಎಂದರು.
ಅಕ್ರಮ ಮರಳು ಸಾಗಾಣಿಕೆ ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದು, ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿದ ಭೂ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದರು.
ದಂಧೆ ಕಡಿವಾಣಕ್ಕೆ ಸೂಚನೆ: ಅಕ್ರಮ ಮರಳು ದಂಧೆಯಲ್ಲಿ ತೊಡಗಿದವರ ಮೇಲೆ ರೌಡಿಶೀಟರ್ ಕೇಸ್ ದಾಖಲಿಸಲಾಗುತ್ತದೆ. ಈ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಸೂಚಿಸಿದೆ. ಈಗಾಗಲೇ ರಾಜ್ಯ ಸರ್ಕಾರದ ಆದೇಶದಂತೆ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿದ್ದು, ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯುವ ಅವಶ್ಯಕತೆಯಿಲ್ಲ. ಯಾರೇ ಅಕ್ರಮ ಎಸಗಿದರೂ ಕಾನೂನು ಕ್ರಮ ನಿಶ್ಚಿತ ಎಂದು ಹೇಳಿದರು.ಲೋಕೋಪಯೋಗಿ ಇಲಾಖೆಯ ಇಇ ಶಂಕ್ರಪ್ಪ ಮಾತನಾಡಿ, ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಸುಮಾರು 8 ಕೋಟಿ ಇದುವರೆಗೆ ದಂಡ ವಿಧಿಸಿದೆ. ಅಕ್ರಮ ಮರಳು ಸಂಗ್ರಹ ಮಾಡಿದವರ ಭೂ ಮಾಲೀಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಸಹಾಯಕ ಆಯುಕ್ತ ಎಂ.ಪಿ. ಮಾರುತಿ, ಡಿವೈಎಸ್ಪಿ ಅನಿತಾ ಹದ್ದಣ್ಣವರ್, ತಹಸೀಲ್ದಾರ್ ಲಕ್ಷ್ಮಯ್ಯ ನಾಯಕ, ಸಿಪಿಐ ರಮೇಶ ಮೇಟಿ, ಪಿಎಸ್‌ಐ ಬಸವರಾಜ ಪೋಲಾರೆ ಸೇರಿ ಅನೇಕರಿದ್ದರು.