ಶತಮಾನದ ಐವಾನ್-ಎ-ಷಾಹಿ ಅಂದ ಚೆಂದಕ್ಕೆ ಕಾಂಪೌಂಡ್ ಕುತ್ತು
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಲೋಕೋಪಯೋಗಿ ಇಲಾಖೆ ಸುಪರ್ದಿಯ ಐವಾನ್-ಎ-ಷಾಹಿ ಸರ್ಕಾರಿ ಅತಿಥಿಗೃಹದ ಒಂದು ಪಾರ್ಶ್ವದಲ್ಲಿ (ಪ್ರಾದೇಶಿಕ ಆಯುಕ್ತರ ನಿವಾಸವಿರುವ ಭಾಗ) ವಾಹನ ನಿಲುಗಡೆಯ ಸ್ಥಳ ಒಳಗೊಂಡಂತೆ ಇಟ್ಟಿಗೆ ಬಳಸಿ ನಿರ್ಮಿಸುತ್ತಿರುವ ಕಾಂಪೌಂಡ್ನಿಂದ ಅತಿಥಿಗೃಹದ ಸೌಂದರ್ಯವೇ ಕಳೆಗುಂದಿದೆ.
ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ಹೈದ್ರಾಬಾದ್ ನಿಜಾಮರು 125 ವರ್ಷಗಳ ಹಿಂದೆ ನಯನ ಮನೋಹರ, ಸುಂದರ ಕೆತ್ತನೆಯಿರುವ, ಉತ್ತಮ ವಿನ್ಯಾಸದ ಹಾಗೂ ಕಟ್ಟಡದ ಸುತ್ತ ಕಲಾತ್ಮಕತೆಯಿಂದ ಕೂಡಿರುವ ಶಿಲಾಕಂಬಗಳಿರುವ ಅತ್ಯಾಕರ್ಷಕ ವಾರಿಮ ಗೃಹವನ್ನು ನಿರ್ಮಿಸಿದ್ದರು.
ಆದರೀಗ ಆಕರ್ಷಕ ಅತಿಥಿಗೃಹದ ಕಲ್ಲಿನ ಕಂಬಗಳಿಗೆ ಹೊಂದಿಕೊಂಡೇ ಸಿಮೆಂಟ್- ಇಟ್ಟಿಗೆಯ ಕಾಂಪೌಂಡ್ ತಲೆಎತ್ತುತ್ತಿದ್ದು, ಒಂದು ಪಾರ್ಶ್ವದ ಆಕರ್ಷಣೆಗೇ ಅಡ್ಡಿಯಾದಂತಾಗಿದೆ. ಅದರಲ್ಲೂ ಒಂದು ಶಿಲಾಕಂಬವಂತೂ ಸಿಮೆಂಟ್ನಿಂದಾಗಿ ಅಂದಗೆಟ್ಟಿದೆ.
ಎಲ್ಲರೂ ಗಪ್ಚುಪ್!
ಅಂದಗೆಡಿಸುವ ಇಂತಹ ಆವರಣ ಗೋಡೆ ನಿರ್ಮಾಣದ ಅಗತ್ಯತೆ ಕುರಿತು ಉಸ್ತುವಾರಿ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳನ್ನು 'ಕನ್ನಡಪ್ರಭ' ಪ್ರಶ್ನಿಸಿದರೆ ಅವರ್ಯಾರೂ ಉತ್ತರಿಸಲು ಸಿದ್ಧರಿಲ್ಲ. ಹೆಸರು ಸಹ ಬರೆಯಬೇಡಿ ಎನ್ನುತ್ತ ಕಾಂಪೌಂಡ್ ನಿರ್ಮಾಣ ಕಾಮಗಾರಿ ಗೊತ್ತಿದೆ. ಆದರೆ ಯಾಕೆ ಎಂಬುದಕ್ಕೆ ತಮ್ಮಲ್ಲಿ ಉತ್ತರವಿಲ್ಲ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ ಗುಡಗುಂಟಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಮೋಬೈಲ್ ಕರೆ ಸ್ವೀಕರಿಸಲಿಲ್ಲ. ಬದಲಾಗಿ ತಮ್ಮ ಸಹಾಯಕರ ಕೈಗೆ ಮೊಬೈಲ್ ಕೊಟ್ಟು ತಾವು ಮೀಟಿಂಗ್ನಲ್ಲಿ ಇದ್ದುದಾಗಿ ಹೇಳುವಂತೆ ಸೂಚಿಸಿದರು. ಇಲಾಖೆಯ ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳೂ ಸುಂದರ ವಾಸ್ತುಶಿಲ್ಪ ವೈಭವದ ಅತಿಥಿಗೃಹದ ಅಂದಕ್ಕೇ ಕುತ್ತು ತರುವಂತಹ ಕಾಮಗಾರಿ ಸಾಗುತ್ತಿದ್ದರೂ ಬಾಯಿಬಿಡದೆ, ಮಾಹಿತಿ ಕೇಳಿದರೆ ಯಾಕೆ ಬಾಯಿಬಿಡುತ್ತಿಲ್ಲ ಎಂಬುದು ನಿಗೂಢ!
ಕಾಂಪೌಂಡ್ ನಿರ್ಮಾಣ ಯಾಕೆ?
ಅತಿಥಿಗೃಹ ಅದಾಗಲೇ ತನ್ನ ಸುತ್ತಲೂ 10ರಿಂದ 15 ಅಡಿ ಎತ್ತರದ ಗಟ್ಟಿಮುಟ್ಟಾದ ಆವರಣ ಗೋಡೆ ಹೊಂದಿದೆ. ಆದರೂ ಮತ್ತೆ ಒಳಗಡೆ ಮಿನಿ ಕಾಂಪೌಂಡ್ ನಿರ್ಮಿಸುತ್ತಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ. ಇದು ಮುಂಚೆ ಗುಲ್ಬರ್ಗ ಕಂದಾಯ ವಿಭಾಗೀಯ ಕಚೇರಿಯಾಗಿ ಬಳಕೆಯಲ್ಲಿತ್ತು. ನಂತರ ಸರ್ಕಾರ ಈ ಕಚೇರಿಗಳನ್ನು ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತಾಲಯ ರಚಿಸಿದಾಗ ಕೆಲ ತಿಂಗಳ ಮಟ್ಟಿಗೆ ಡಿವಿಸಿ ವಸತಿಗೃಹವಾಗಿ ಬಳಕೆಯಾಗುತ್ತಿದ್ದ ಐವಾನ್-ಎ-ಷಾಹಿ ಕಟ್ಟಡದ ಭಾಗ ಖಾಲಿಯಾಗಿಯೇ ಇತ್ತು. ಮತ್ತೆ ಸರ್ಕಾರ ಪ್ರಾದೇಶಿಕ ಆಯುಕ್ತರನ್ನು ನೇಮಿಸಿದಾಗ ಪ್ರಾದೇಶಿಕ ಆಯುಕ್ತರಿಗೆ ಅಧಿಕೃತ ನಿವಾಸದ ಸೌಕರ್ಯ ಒದಗಿಸಲಾಯ್ತು. ಈ ನಿವಾಸದ ಮುಂದೆ ಪಾರ್ಕಿಂಗ್ ಸ್ಥಳವಿದೆ. ಮುಂಚೆ ಇಲ್ಲಿ ಕೆಲಸ ಮಾಡುತ್ತಿದ್ದ ಡಿವಿಸಿ ಕಚೇರಿಗೋಸ್ಕರ ವಾಹನ ನಿಲುಗಡೆ ಬಳಕೆಯಾಗುತ್ತಿತ್ತು. ಆ ಕಚೇರಿ ರದ್ದಾದ ತಕ್ಷಣ ಅತಿಥಿ ಗೃಹಕ್ಕೆ ಬರುವವರು ತಮ್ಮ ಬೈಕ್ಗಳ ನಿಲುಗಡೆಗೆ ಬಳಸುತ್ತಿದ್ದರು. ಇದೀಗ ಕಾಂಪೌಂಡ್ ಈ ಪಾರ್ಕಿಂಗ್ ಸ್ಥಳ ಒಳಗೊಂಡೇ ರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಅತಿಥಿಗೃಹಕ್ಕೆ ಬರುವವರಿಗೆ ವಾಹನ ನಿಲುಗಡೆಯೂ ಸುಲಭದ್ದಲ್ಲ ಎಂಬಂತಾಗಲಿದೆ.
ನಿರ್ಮಿತಿ ಕೇಂದ್ರದಿಂದ ಕಾಮಗಾರಿ
ಸ್ಥಳಕ್ಕೆ ಭೇಟಿ ನೀಡಿದ್ದ 'ಕನ್ನಡಪ್ರಭ' ಅಲ್ಲಿನ ಕಾರ್ಮಿಕರನ್ನು ಮಾತನಾಡಿಸಿದಾಗ ನಿರ್ಮಿತಿ ಕೇಂದ್ರದಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ನಿರ್ಮಿತಿ ಕೇಂದ್ರದ ಎಂಜಿನಿಯರ್ಗಳನ್ನು ಮಾತನಾಡಿಸಿದರೆ ಅವರೂ ಕಾಂಪೌಂಡ್ ನಿರ್ಮಾಣದ ಕಾಮಗಾರಿ ನಡೆದಿದೆ ಎಂದರೇ ಹೊರತು ಅದರ ಅಗತ್ಯತೆ ಬಗ್ಗೆ ಮಾಹಿತಿ ನೀಡಲಿಲ್ಲ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಇದರ ಸೌಂದರ್ಯಕ್ಕೆ 50 ಲಕ್ಷ ಬಿಡುಗಡೆ ಮಾಡಿ ವಾಸ್ತುಶಿಲ್ಪಕ್ಕೆ ಧಕ್ಕೆ ಬಾರದಂತೆ ಹುಲ್ಲುಹಾಸು, ಅಲಂಕಾರಿಕ ಕೆಲಸಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಆಗಿನ ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್, ಹೈ-ಕ ಮಂಡಳಿ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ ಅಳರು ಐವಾನ್-ಎ-ಶಾಹಿ ಪ್ರದೇಶದಲ್ಲಿ ಹಸೀರಿಕರಣ ಯೋಜನೆ ರೂಪಿಸಿ ಜಾರಿಗೆ ತಂದಿದ್ದರು. ಇದರಿಂದಾಗಿ ಒಣಗಿದ್ದ ಅತಿಥಿಗೃಹ ಇನ್ನಷ್ಟು ಕಳೆಗಟ್ಟಿತ್ತು. ಆದರೀಗ ಕಾಂಪೌಂಡ್ ಅದರ ಅಂದಕ್ಕೇ ಅಡ್ಡಿಯಾಗಿದ್ದು, ಉಸ್ತುವಾರಿ ಹೊಣೆ ಹೊತ್ತವರು ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.
ಐವಾನ್- ಎ- ಷಾಹಿ ಸರ್ಕಾರಿ ಅತಿಥಿಗೃಹದ ವಿಶೇಷತೆಗಳು
ಕಲಾತ್ಮಕ ಶಿಲೆಗಳನ್ನು ಬಳಸಿ ನಿರ್ಮಿಸಿದ ಕಟ್ಟಡ, ಎತ್ತರ ಗೋಡೆಗಳು, ವಿಶಾಲವಾದ ಮೊಗಸಾಲೆ, ಕೋಣೆಗಳು. ಇದರಿಂದಾಗಿ ಕಟ್ಟಡದಲ್ಲಿ ನಿಸರ್ಗ ಸಹಜ ಹವಾನಿಯಂತ್ರಣ ವ್ಯ.ವಸ್ಥೆ.
ಸುಂದರ ಕಮಾನುಗಳು ಕಟ್ಟಡ ಸೌಂದರ್ಯ ವರ್ಧಕಗಳು.
ಕಲಾತ್ಮಕ ಸಾಲುಕಂಬಗಳಿಂದಾಗಿ ವಿಶ್ರಾಂತಿ ಗೃಹದ ಅಂದ ಚೆಂದಕ್ಕೆ ಕಳೆ.
ಸುಂದರ ವಾಸ್ತುಶಿಲ್ಪದ ಕಟ್ಟಡ, ನಿಜಾಂ ಅರಸರು ಗುಲ್ಬರ್ಗಕ್ಕೆ ಬಂದಾಗ ಇಲ್ಲೇ ತಂಗುತ್ತಿದ್ದರು.
ಹೈದ್ರಾಬಾದ್ನಿಂದ ನೇರವಾಗಿ ಅತಿಥಿಗೃಹದ ಅಂಗಳದವರೆಗೂ ರೈಲು ಸಂಪರ್ಕ ಇತ್ತಂತೆ. ಅದಕ್ಕೆ ಕುರುಹಾಗಿ ಈಚೆಗಿನ ದಿನಗಳವರೆಗೂ ಇದರ ಅಂಗಳದಲ್ಲಿ ಹಳಿಗಳಿದ್ದವು.
ಗುಲ್ಬರ್ಗ ಅಷ್ಟೇ ಯಾಕೆ, ರಾಜ್ಯದಲ್ಲಿರುವ ಸರ್ಕಾರಿ ಒಡೆತನದ, ಪಿಡಬ್ಲೂಡಿ ಸುಪರ್ದಿಯ ಅತಿಥಿಗೃಹಗಳಲ್ಲೇ ಗುಲ್ಬರ್ಗದ ಐವಾನ್- ಏ- ಶಾಹಿ ಹೆಸರುವಾಸಿ.