ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಚಿವರು, ಶಾಸಕರೇ ಗುತ್ತಿಗೆದಾರರ ಪರನಾ?

Rashmi Kasaragodu
Updated On : 26 Jul 2014, 11:41 am

ಸಿಂಧನೂರು: ತುಂಗಭದ್ರಾ ಜಲಾಶಯದಲ್ಲಿ ಪ್ರತಿವರ್ಷ 40ರಿಂದ 50 ಟಿಎಂಸಿ ನೀರು ಸಂಗ್ರವಿದ್ದಾಗಲೂ ನೀರು ಬಿಡಲಾಗುತ್ತಿತ್ತು. ಈ ಬಾರಿ 65 ಟಿಎಂಸಿ ಸಂಗ್ರಹವಾಗಿದ್ದರೂ ಕಾಲುವೆಗೆ ನೀರು ಹರಿಸುವ ಬಗ್ಗೆ ನೀರಾವರಿ ಸಚಿವರು, ಶಾಸಕರು ಮಾತನಾಡದಿರುವುದು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂಬುದನ್ನು ತೋರುತ್ತದೆ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಆರೋಪಿಸಿದರು. ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಜುಲೈನಲ್ಲಿ ಎಡದಂಡೆ ನಾಲೆಗೆ ನೀರು ಬಿಡಲಾಗುತ್ತಿತ್ತು. ಈ ಬಾರಿ ತಿಂಗಳು ಮುಗಿಯುತ್ತಾ ಬಂದರೂ ಚಕಾರವೆತ್ತದಿರುವುದಕ್ಕೆ ಸಚಿವರು, ಶಾಸಕರು ಗುತ್ತಿಗೆದಾರರ ರಕ್ಷಣೆಗೆ ನಿಂತಿದ್ದಾರೆಂದು ಅನುಮಾನ ಉಂಟಾಗುತ್ತಿದೆ ಎಂದು  ಟೀಕಿಸಿದರು.
ತರಾತುರಿ ಕೆಲಸ: ಮುಖ್ಯ ಕಾಲುವೆಯ 68, 69, 49 ಮತ್ತು 59ನೇ ಮೈಲ್‌ನಲ್ಲಿ ದುರಸ್ತಿ ಕಾಮಗಾರಿಯು ಅತ್ಯಂತ ಕಳಪೆಯಾಗಿದೆ. ಕಾಲುವೆಗೆ ನೀರು ಸ್ಥಗಿತಗೊಂಡು ತಿಂಗಳಾದ ನಂತರ ಟೆಂಡರ್ ಕರೆಯಲಾಗಿದೆ. ಹೊಸ ಕಾಮಗಾರಿಗಳಿಗೆ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಹಂಚಿಕೊಡುವ ಕೆಲಸ ನಡೆದಿದೆ. ಪ್ರತಿ ಕಾಮಗಾರಿಯಲ್ಲೂ ನಿಯಮ ಉಲ್ಲಂಘಿಸಲಾಗಿದೆ. ಕಾಮದಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈಗ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಹಣ ಲಪಟಾಯಿಸುವ ಹುನ್ನಾರ ನಡೆದಿದೆ ಎಂದು ಆಪಾದಿಸಿದರು.
ಯಾರನ್ನು ಕೇಳಬೇಕು: ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಅವರನ್ನು ಕೇಳಿದರೆ ಜಿಲ್ಲಾಧಿಕಾರಿಯಿಂದ ಪತ್ರ ಬಂದರೆ ಅಥವಾ ಐಸಿಸಿ ಅಧ್ಯಕ್ಷರು ಹೇಳಿದರೆ ನೀರು ಹರಿಸುವುದಾಗಿ ಹೇಳುತ್ತಾರೆ. ರಾಯಚೂರಿಗೆ ಜಿಲ್ಲಾಧಿಕಾರಿಗಳೇ ಇಲ್ಲ. ಸ್ಥಾನಿಕ ಅಧಿಕಾರಿ ಬೇಜವಾಬ್ದಾರಿಯಾಗಿದ್ದಾರೆ. ಸಚಿವರು ಎಲ್ಲಿದ್ದಾರೋ ಏನೊ, ಯಾರನ್ನು ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಾದ್ಯಂತ ಕುಡಿಯುವ ನೀರಿನ ಕೆರೆಗಳು ಬತ್ತಿ ಹೋಗಿವೆ. ಆಗಸ್ಟ್‌ನಲ್ಲಿ ನೀರು ಬಿಟ್ಟರೆ ಬತ್ತದ ಇಳುವರಿ ಕಡಿಮೆಯಾಗುತ್ತದೆ ಎನ್ನುವ ಆತಂಕ ರೈತರದ್ದು. ತಕ್ಷಣ ಎಡದಂಡೆ ನಾಲೆಗೆ ನೀರು ಹರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಹಂಪಯ್ಯ ಸ್ವಾಮಿ, ನಗರಸಭೆ ಸದಸ್ಯರಾದ ಗ್ಯಾನಪ್ಪ, ಅನಿತಾ ಸಿದ್ರಾಮಪ್ಪ, ನಾಗಪ್ಪ ಗಿರಿಜಾಲಿ, ಮುಖಂಡರಾದ ಬಿ. ಲಿಂಗಪ್ಪ, ಮಲ್ಲಪ್ಪ ದಡೇಸುಗೂರು, ಗಂಗಾಧರ ಹೂಗಾರ, ಸಾಯಿರಾಮ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement