ಶಿವಸೇನೆ ಪುಂಡಾಟಿಕೆಗೆ ಆಕ್ರೋಶ
ಕ.ಪ್ರ. ವಾರ್ತೆ ರಾಯಚೂರು ಜು. 26
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಲ್ಲದೇ ಸಂಸ್ಥೆಯ ಸಿಬ್ಬಂದಿಗೆ ಹಲ್ಲೆ ಮಾಡಿ ಗಾಯಗೊಳಿಸಿದ ಶಿವಸೇನೆ ಮತ್ತು ಎಂಇಎಸ್ ಗೂಂಡಾ ವರ್ತನೆ ಖಂಡಿಸಿ ನಗರದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಮಹಾವೀರ ವೃತ್ತದಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರದವರೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಶಿವಸೇನೆ ಮತ್ತು ಎಂಇಎಸ್ ನಾಮಫಲಕ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬಸ್ ಮೇಲಿನ ದಾಳಿ ಸಲ್ಲ: ಬೆಳಗಾವಿ ಜಿಲ್ಲೆಯಲ್ಲಿ ಏಳೂರು ಗ್ರಾಮದ ಬಳಿ ಶಿವಸೇನೆ ಮತ್ತು ಎಂಇಎಸ್ ನವರು ಅಕ್ರಮವಾಗಿ ಸ್ಥಾಪಿಸಿದ್ದ ನಾಮಫಲಕ ವನ್ನು ತೆರವುಗೊಳಿಸಲು ಕೋರ್ಟ್ ಸೂಚನೆ ನೀಡಿದ್ದು, ಅದರಂತೆಯೇ ಅಲ್ಲಿನ ಜಿಲ್ಲಾಡಳಿತ ತೆರವುಗೊಳಿಸಿದೆ. ಅದರಿಂದ ಅಸಮಾಧಾನಗೊಂಡ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳ ಕಾರ್ಯಕರ್ತರು ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಿದ್ದಾರೆಂದು ದೂರಿದರು.
ಸಾರಿಗೆ ಸಂಸ್ಥೆ ಸಿಬ್ಬಂದಿ ಮೇಲೆ ದಾಳಿ ಮಾಡಿರುವ ಎರಡೂ ಸಂಘಟನೆಗಳ ಕಾರ್ಯಕರ್ತರು ಗೂಂಡಾ ವರ್ತನೆ ಪ್ರದರ್ಶಿಸಿದ್ದು, ಹೊಡೆದು ಗಾಯಗೊಳಿಸಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ಮೊದಲಿನಿಂದಲೂ ಬೆಳಗಾವಿ ವಿಚಾರಕ್ಕೆ ಅನಗತ್ಯ ಗೊಂದಲ ಎಬ್ಬಿಸುತ್ತಿದ್ದಾರೆಂದು ಟೀಕಿಸಿದರು.
ಕೊಲೆ ಕೇಸ್ ದಾಖಲಿಸಿ: ಮೇಲಿಂದ ಮೇಲೆ ಕನ್ನಡಿಗರ ಭಾವನೆಗಳಿಗೆ ಕೆದಕಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಮುಖಂಡರನ್ನು ರಾಜ್ಯ ಸರ್ಕಾರ ಕೂಡಲೇ ಗಡಿಪಾರು ಮಾಡುವ ನಿಟ್ಟಿನಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಹೋರಾಟಗಾರರು, ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ದಾಳಿ ಮಾಡಿ ಜಖಂಗೊಳಿಸಿದ್ದಲ್ಲದೇ ಸಂಸ್ಥೆಯ ಸಿಬ್ಬಂದಿಗೆ ಹಲ್ಲೆ ಮಾಡಿ ಗಾಯಗೊಳಿಸಿದವರ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಿಸುವಂತೆ ಆಗ್ರಹಿಸಿದರು. ಸಾರಿಗೆ ಸಂಸ್ಥೆಯು ಕನ್ನಡಿಗರ ಆಸ್ತಿಯಾಗಿದೆ. ಅದನ್ನು ರಕ್ಷಿಸುವುದು ಕನ್ನಡಿಗರ ಹೊಣೆಯಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ನಿಟ್ಟಿನಲ್ಲಿ ಕೂಡಲೇ ಬೆಳಗಾವಿ ಘಟನೆ ನಂತರದಲ್ಲಿ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ನಡೆಸಿದ ಪುಂಡಾಟಿಕೆಯ ಬಗ್ಗೆ ಚರ್ಚಿಸಬೇಕು. ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡುವಂತೆ ಒತ್ತಾಯಿಸಿದರು.
ನಮ್ಮಲ್ಲೂ ಇದಾರೆ: ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕರ್ನಾಟಕದಲ್ಲಿಯೂ ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಅನೇಕ ಇಲಾಖೆಗಳಿದ್ದು, ಅಂಥ ಇಲಾಖೆಗಳ ಆಸ್ತಿಗೆ ಕನ್ನಡಿಗರೂ ಆಕ್ರೋಶಗೊಂಡು ದಾಳಿ ಮಾಡುವ ಸಾಧ್ಯತೆಯಿದೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಎಚ್ಚರಿಸಿದರು.
ಕೂಡಲೇ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳ ವಿರುದ್ಧ ಗೂಂಡಾ ಕಾಯಿದೆ ಅಡಿ ಕ್ರಮ ಕೈಗೊಂಡು ಮುಖಂಡರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್, ಪ್ರಮುಖರಾದ ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ಕಿಶನ್ ರಾವ್, ರಘುವೀರ ನಾಯಕ, ಮಲ್ಲಿಕಾರ್ಜುನ, ಬಂದೇನವಾಜ್, ನಾಗರಾಜ ಬಿಚ್ಚಾಲಿ ಸೇರಿದಂತೆ ಅನೇಕರಿದ್ದರು.