ರಂಜಾನ್- ಬೇಡಿಕೆ ತಕ್ಕಂತೆ ಹಾಲಿನ ಪೂರೈಕೆ: ಒಕ್ಕೂಟ
ಗುಲ್ಬರ್ಗ: ಗುಲ್ಪರ್ಗ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ವತಿಯಿಂದ ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಎಲ್ಲ ತಾಲೂಕು ಮತ್ತು ಪಟ್ಟಣಗಳಿಗೆ ರಂಜಾನ್ ಹಬ್ಬದ ವಿಶೇಷ ಹಾಲಿನ ಬೇಡಿಕೆಯ ವ್ಯವಸ್ಥೆ ಮಾಡಲಾಗಿದೆ. ಒಕ್ಕೂಟದಿಂದ ಪ್ರತಿದಿನ ಮಾರಾಟವಾಗುವ ಪ್ರಮಾಣವಾದ 70,000 ಲೀಟರ್ಗೆ ಮೂರು ಪಟ್ಟು ಹೆಚ್ಚು ಹಾಲು ಸುಮಾರು 2 ಲಕ್ಷ ಲೀಟರ್ ಬೇಡಿಕೆಯಿರುವುದರಿಂದ ಇದನ್ನು ಪೂರೈಸಲು ಎಲ್ಲ ಏರ್ಪಾಡು ಮಾಡಲಾಗಿದೆ. ಒಕ್ಕೂಟದ ವ್ಯಾಪ್ತಿಯ ಹಾಲಿನ ಸಂಗ್ರಹಣೆಯ ಜೊತೆಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯ ಅಡಿಯಲ್ಲಿ ಬರುವ ಒಕ್ಕೂಟಗಳಾದ ಶಿವಮೊಗ್ಗದಿಂದ 90,000, ತುಮಕೂರಿನಿಂದ 90,000 ಮತ್ತು ಕೋಲಾರದಿಂದ 25,000 ಕೆ.ಜಿ.ಗಳಷ್ಟು ಹಾಲನ್ನು ಪಡೆದು ಟೋನ್ಡ್ ಹಾಲು ಮತ್ತು ಶುಭಂ ಮಾದರಿಯಲ್ಲಿ ಹಬ್ಬದ ದಿನ ಸರಬರಾಜು ಮಾಡಲಾಗುವುದು. ರಂಜಾನ್ ಹಬ್ಬದಂದು ಬೇಡಿಕೆಯಂತೆ 20,000 ಕೆ.ಜಿ. ಮೊಸರಿನ ಸರಬರಾಜಿನ ವ್ಯವಸ್ಥೆ ಮಾಡಲಾಗಿರುತ್ತದೆ. ಗ್ರಾಹಕರು ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಪಡೆದು ರಾಜ್ಯದ ರೈತರ ಏಳಿಗೆಗಾಗಿ ಸಹಕರಿಸಲು ಕೋರಲಾಗಿದೆ. ಕಳೆದ ವರ್ಷ ರಂಜಾನ್ ಹಬ್ಬಕ್ಕೆ 1,60,000 ಲೀಟರ್ ಹಾಲು ಮತ್ತು 15,000 ಕೆ.ಜಿ. ಮೊಸರು ಮಾರಾಟವಾಗಿತ್ತು ಎಂದು ಹಾಲು ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ವಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.