ಅಸಲು ಪಾವತಿಸಿದ್ರೆ ಬಡ್ಡಿ ಮನ್ನಾ ಆಗುತ್ತೆ
ರಾಯಚೂರು: 1957ರಿಂದ 1995ನೇ ಸಾಲಿನವರೆಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಯಚೂರು ವತಿಯಿಂದ ಪಡೆದ ವಿವಿಧ ಸಾಲಗಳನ್ನು ಏಕಗಂಟು ತೀರುವಳಿ ಯೋಜನೆ ಅಡಿ ಸಾಲ ಮರುಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದೆಂದು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ರಾಯಣ್ಣ ತಿಳಿಸಿದ್ದಾರೆ.
ವೈಯಕ್ತಿಕ ಉದ್ದಿಮೆದಾರರು, ನೋಂದಾಯಿತ ಸಂಘ, ಸಹಕಾರ ಸಂಘದವರು ಸಾಲ ಪಡೆದ ಬಾಕಿದಾರರಿಗೆ ಏಕಗಂಟು ತೀರುವಳಿ ಯೋಜನೆಯನ್ನು ಜಾರಿಗೊಳಿಸಿ ಅದರ ಮೂಲಕ ಸಾಲ ವಸೂಲಾತಿಗೆ ಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ. ಸಾಲವನ್ನು ಮರುಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು ಬಾಕಿಯಿರುವ ಸಾಲದ ಅಸಲು 2015ರ ಮಾ.31ರೊಳಗೆ ಪೂರ್ಣ ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಹೇಳಿದರು.
ಡಿಡಿ ತೆಗೆಯಿರಿ: ಜಿಲ್ಲೆಯ 5 ತಾಲೂಕುಗಳ ಖಾದಿ ಮಂಡಳಿಯ ಬಾಕಿದಾರರು ಸಾಲ ಮರುಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಮನವಿ ಮಾಡಿರುವ ಅವರು, ಸಾಲದ ಬಾಕಿಯನ್ನು ಕರ್ನಾಟಕ ಸ್ಟೇಟ್ ಖಾದಿ ಮತ್ತು ವಿಲೇಜ್ ಇಂಡಸ್ಟ್ರೀಸ್ ಬೋರ್ಡ್ ಬೆಂಗಳೂರು ಇವರ ಹೆಸರಿನಲ್ಲಿ ಡಿಡಿ ತೆಗೆಯಿಸಲು ಕೋರಿದ್ದಾರೆ. ಈ ಯೋಜನೆಯೂ ಖಾದಿ ಮಂಡಳಿಯಿಂದ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ ಪಡೆದರುವ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ. ಖಾದಿ ಸಂಘ ಸಂಘ ಸಂಸ್ಥೆಗಳು ಹಾಗು ವೈಯಕ್ತಿಕ ಕಸಬುದಾರರು ಮಂಡಳಿಯಿಂದ ಪಡೆದಿರುವ ಸಾಲವನ್ನು 2015ರ ಮಾ.31ರೊಳಗೆ ಒಂದೇ ಬಾರಿಗೆ ಪೂರ್ಣ ಮರುಪಾವತಿಸಿದಲ್ಲಿ ಮಾತ್ರ ಬಡ್ಡಿ ಮನ್ನಾ ಆಗಲಿದೆ. ಈ ಯೋಜನೆಯೂ ನ್ಯಾಯಾಲಯದಲ್ಲಿ ಯಾವುದೇ ವ್ಯಾಜ್ಯಗಳಿಲ್ಲದ ಪಕ್ಷದಲ್ಲಿ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗೆ ಮೊ- 9480825635 ಸಂಪರ್ಕಿಸಿ.