ವಚನ ಸಾಹಿತ್ಯದಿಂದ ಸಮಾಜ ಪರಿವರ್ತನೆ
ಸಿಂಧನೂರು: ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರದ ಸಂಯುಕ್ತಾಶ್ರಯದಲ್ಲಿ ಬಸವ ಚಾರಿಟಬಲ್ ಟ್ರಸ್ಟ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಚನ ಜ್ಯೋತಿ ಕಾರ್ಯಕ್ರಮ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸವ ಕೇಂದ್ರದ ಗೌರವ ಸಲಹೆಗಾರ ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಶರಣರ ನಾಡಿನಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಖಂಡನೀಯ. ಮಹಿಳೆಯರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಧೈರ್ಯ ಬರುತ್ತದೆ. ಹೆಚ್ಚು ಹೆಚ್ಚು ವಚನಗಳ ಅಧ್ಯಯನ ಅಗತ್ಯವಿದೆ. ವಚನ ಸಾಹಿತ್ಯವನ್ನು ಮನೆ-ಮನೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ವಚನ ಸಾಹಿತ್ಯದಿಂದ ಮಾತ್ರ ಸಮಾಜ ಪರಿವರ್ತನೆ ಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕಿದೆ ಎಂದರು.
ಚಾಲನೆ: ಕು. ಮುಕ್ತಶ್ರೀ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಲಮ್ಮ ವಿರುಪಾಕ್ಷಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸುಭದ್ರಮ್ಮ ಗುಡಿಹಾಳ ಸಾನ್ನಿಧ್ಯ ವಹಿಸಿದ್ದರು. ಎನ್.ಆರ್. ಫಾಲಾಕ್ಷಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಹಾಗೂ ಶರಣಬಸವ ಧ್ವಜಾರೋಹಣ ಮಾಡಿದರು.
ಬಸನಗೌಡ ಕೆಲ್ಲೂರು, ಬಸವರಾಜ ಸಾಹುಕಾರ ತುರ್ವಿಹಾಳ, ಗುಂಡೇಗೌಡ ಲಕ್ಕಂಪುರ ಬೊಮ್ಮನಾಳ ವೇದಿಕೆಯಲ್ಲಿದ್ದರು. ಆನಂದ ಪತ್ತಾರ ಹಾಗೂ ಪಂಪಣ್ಣ ಹಳ್ಳಿ ವಚನ ಹೇಳಿದರು. ವಿಶ್ವನಾಥ ಸ್ವಾಗತಿಸಿದರು. ಶ್ರೀಶೈಲ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ ನಿರೂಪಿಸಿದರು.