ಕೃಷಿ ಕ್ಷೇತ್ರ ಪ್ರಗತಿಗೆ ಸಿಬ್ಬಂದಿ ಕೊರತೆ ಅಡ್ಡಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜೂ.2
ಜಿಲ್ಲೆಯಲ್ಲಿ ರೈತರು ಮತ್ತೊಂದು ಮುಂಗಾರು ಹಂಗಾಮಿಗೆ ಭರದ ಸಿದ್ಧತೆ ಆರಂಭಿಸಿದ್ದಾರೆ. ಕೃಷಿ ಇಲಾಖೆಯೂ ರೈತರ ಜತೆಗೂಡಿ ಕಾರ್ಯನಿರ್ವಹಿಸಲು ಹಾಗೂ ಅಗತ್ಯಗಳ ಪೂರೈಕೆಗೆ ಮುಂದಾಗಿದೆ. ಆದರೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಂದಾಗಿ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಜತೆಗೆ ಯೋಜನೆಗಳ ಅನುಷ್ಠಾನಕ್ಕೂ ತೊಡಕಾಗಿದೆ.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದಲೇ ಆರಂಭಗೊಳ್ಳುವ ಖಾಲಿ ಹುದ್ದೆಗಳ ಸಾಲು ತಾಲೂಕು ಕೇಂದ್ರ ಹಾಗೂ ರೈತರ ಬಳಿಯಿದ್ದು ಕಾರ್ಯ ನಿರ್ವಹಿಸಬೇಕಾದ ರೈತ ಸಂಪರ್ಕ ಕೇಂದ್ರಗಳವರೆಗೂ ಸಾಗುತ್ತದೆ. ಪರಿಣಾಮ ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಆರಂಭದಲ್ಲಿ ಸಿಬ್ಬಂದಿ ಕೆಲಸದ ಒತ್ತಡಕ್ಕೆ ಸಿಲುಕುತ್ತಾರೆ. ಅಷ್ಟೇ ಅಲ್ಲ, ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಪರದಾಡುವಂತಾಗುತ್ತದೆ.
ಖಾಲಿ ಹುದ್ದೆಗಳೇ ಹೆಚ್ಚು: ಜಿಲ್ಲಾ ಮಟ್ಟದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಂಟಿ ಕೃಷಿ ನಿರ್ದೇಶಕರ ಹುದ್ದೆಯೇ ಖಾಲಿಯಿದೆ. ಇನ್ನು ಇವರ ಕಚೇರಿಯಲ್ಲಿನ ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು(ರೈತ ಮಹಿಳೆ), ಎಫ್‌ಡಿಸಿ, ಎಸ್‌ಡಿಸಿ, ವಾಹನ ಚಾಲಕ, ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟು 30 ಮಂಜೂರಾದ ಹುದ್ದೆಗಳ ಪೈಕಿ 12 ಹುದ್ದೆಗಳು ಖಾಲಿಯಿವೆ.
ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದ ಕೃಷಿ ಕೇಂದ್ರಕ್ಕೆ ಮಂಜೂರಾದ ಒಟ್ಟು 24 ವಿವಿಧ ಹುದ್ದೆಗಳ ಪೈಕಿ 10 ಭರ್ತಿಯಾಗಿದ್ದು, ಇನ್ನೂ 14 ಖಾಲಿಯಿವೆ. ಹಾಗಾಗಿ ಕೃಷಿ ಸಂಬಂಧಿ ಕೆಲಸ ಕಾರ್ಯಗಳಿಗೆ ತೊಡಕಾಗಿದೆ, ಕೃಷಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂಬ ದೂರು ರೈತರದ್ದು. ಆದರೆ ಸಿಬ್ಬಂದಿಯೇ ನೇಮಕಗೊಂಡಿಲ್ಲ ಎಂಬುದು ವಾಸ್ತವ.
ರಾಯಚೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿಯೂ ಹುದ್ದೆಗಳು ಖಾಲಿಯಿವೆ. ಮಂಜೂರಾದ 44 ಹುದ್ದೆಗಳಲ್ಲಿ 22 ಭರ್ತಿಯಾಗಿದ್ದು, 22 ಖಾಲಿಯಿವೆ. ಮಾನವಿಯ ತಾಲೂಕು ಕಚೇರಿಯಲ್ಲಿ 38 ಹುದ್ದೆಗಳ ಪೈಕಿ 17 ಹುದ್ದೆ ಭರ್ತಿಯಾಗಿದ್ದು 21 ಖಾಲಿಯಿವೆ. ಸಿಂಧನೂರಿನ 53 ಹುದ್ದೆಗಳ ಪೈಕಿ 21 ಭರ್ತಿಯಾಗಿದ್ದು, 32 ಖಾಲಿಯಿವೆ.
ದೇವದುರ್ಗದ 36 ಹುದ್ದೆಗಳಲ್ಲಿ 15 ಭರ್ತಿಯಾಗಿದ್ದು 21 ಖಾಲಿಯಿವೆ. ಲಿಂಗಸ್ಗೂರಿನ 38 ಹುದ್ದೆಗಳಲ್ಲಿ 13 ಭರ್ತಿಯಾಗಿದ್ದು 25 ಖಾಲಿಯಿವೆ. ಹೀಗೆ ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಒಟ್ಟು 277 ಹುದ್ದೆಗಳ ಪೈಕಿ 121 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 156 ಹುದ್ದೆಗಳು ಖಾಲಿಯಿವೆ.
54 ಅಧಿಕಾರಿಗಳ ಹುದ್ದೆ ಖಾಲಿ: ಅದರಲ್ಲಿಯೇ ಕೃಷಿ ಅಧಿಕಾರಿಗಳ ಒಟ್ಟು 59 ಹುದ್ದೆಗಳಲ್ಲಿ ಕೇವಲ ಐದು ಕಡೆ ಅಧಿಕಾರಿಗಳಿದ್ದು 54 ಖಾಲಿಯಿವೆ. ಅದೇ ರೀತಿ ಸಹಾಯಕ ಕೃಷಿ ಅಧಿಕಾರಿಗಳ 89 ಹುದ್ದೆಗಳಲ್ಲಿ 50 ಭರ್ತಿಯಾಗಿದ್ದು, 39 ಖಾಲಿಯಿವೆ. ಪರಿಣಾಮ ರೈತರಿಗೆ ಕೃಷಿ ಅಧಿಕಾರಿಗಳ ನೆರವು ದೊರೆಯುತ್ತಿಲ್ಲ.
ಅನುಷ್ಠಾನ ಹಿನ್ನಡೆ: ಮುಂಗಾರು ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿಯೇ ಕೃಷಿ ಚಟುವಟಿಕೆಗಳು ಹೆಚ್ಚು ನಡೆಯುತ್ತವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಜತೆಗೆ ಕೃಷಿ ಸಂಬಂಧಿ ಸಲಹೆಗಳನ್ನು ನೀಡುವುದು ತುರ್ತಾಗಿ ಆಗಬೇಕಾದ ಕಾರ್ಯ. ಆದರೆ ಕೃಷಿ ಇಲಾಖೆಯ ರೈತರ ಸಂಪರ್ಕ ಕೇಂದ್ರಗಳೂ ಸೇರಿದಂತೆ ಎಲ್ಲೆಡೆ ಸಿಬ್ಬಂದಿ ಕೊರತೆಯಿದ್ದು, ಅದರಿಂದ ಹಾಲಿ ಸಿಬ್ಬಂದಿಯ ಮೇಲೆ ಕಾರ್ಯಭಾರ ಹೆಚ್ಚಿದೆ.
ಪರಿಣಾಮ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಜಾರಿ ಮತ್ತು ಅನುಷ್ಠಾನಕ್ಕೆ ಅಡಚಣೆಯಾಗುತ್ತಿದೆ. ಅಷ್ಟೇ ಅಲ್ಲ ಅನೇಕ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೈತರು ಕಚೇರಿ ಕೆಲಸ ಕಾರ್ಯಗಳಿಗೆ ಸಾಲುಗಟ್ಟಿ ನಿಲ್ಲುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ.
ಅಕ್ರಮ ಕಡಿವಾಣಕ್ಕೂ ತೊಂದರೆ: ಬಿತ್ತನೆ ಬೀಜ, ರಸಗೊಬ್ಬರದ ಕಾಳಸಂತೆಯ ಮಾರಾಟ ಹಾಗೂ ಹೆಚ್ಚಿನ ಬೆಲೆಗೆ ವರ್ತಕರು ಮಾರಾಟ ಮಾಡುವುದು ತೀರಾ ಸಾಮಾನ್ಯ. ಇಂಥ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಅವರ ಸಹಾಯಕ ಸಿಬ್ಬಂದಿಯ ಕೊರತೆಯಿಂದಾಗಿ ಕೃಷಿ ಇಲಾಖೆಯು ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಯಾಸ ಪಡುವಂಥ ಸ್ಥಿತಿಯಿದ್ದು ಸರ್ಕಾರ ಸಿಬ್ಬಂದಿ ಕೊರತೆ ನೀಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಜಗನ್ನಾಥ ಆರ್. ದೇಸಾಯಿ