ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಕಲಿ ಹಕ್ಕುಪತ್ರ ರದ್ದತಿಗೆ ಆಗ್ರಹಿಸಿ ಧರಣಿ

Mainashree
Updated On : 3 Jun 2014, 11:24 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜೂ.2
ಆಶ್ರಯ ಕಾಲನಿಯಲ್ಲಿನ ನಿವಾಸಿಗಳಿಗೆ ಅವರ ಮನೆ ಹಾಗೂ ಜಾಗವನ್ನು ಸಕ್ರಮಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು.
ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ನಗರದ ಚಂದ್ರಬಂಡಾ ರಸ್ತೆಯಲ್ಲಿ ಆಶ್ರಯ ಯೋಜನೆ ಅಡಿ ಮನೆಗಳನ್ನು ನಿರ್ಮಿಸಲಾಗಿದೆ. ನಿರಾಶ್ರಿತರಿಗೆ ಈ ಯೋಜನೆ ಅಡಿ ಮನೆ ನಿರ್ಮಿಸಿದ್ದರೂ ಅವುಗಳು ನಗರಸಭೆ ಸದಸ್ಯರು, ವರ್ತಕರು ಸೇರಿದಂತೆ ಶ್ರೀಮಂತರ ಪಾಲಾಗಿವೆ ಎಂದು ಆರೋಪಿಸಿದರು.
ಶಾಸಕರ ಅಧ್ಯಕ್ಷತೆಯ ಆಶ್ರಯ ಕಮಿಟಿ ಕೈಗೊಂಡ ಅಕ್ರಮದಿಂದಾಗಿ ಬಡವರಿಗೆ ಸೇರಬೇಕಾದ ಆಶ್ರಯ ಮನೆಗಳು ಶಾಸಕರ ಹಿಂಬಾಲಕರು, ಸರ್ಕಾರಿ ನೌಕರರಿಗೆ ವಿತರಿಸಲಾಗಿದೆ. ಸ್ವಂತ ಮನೆಯಿರುವವರಿಗೇ ಆಶ್ರಯ ಮನೆಗಳನ್ನು ಆಗಿನ ಶಾಸಕರು ಹಂಚಿಕೆ ಮಾಡಿದ್ದಾರೆಂದು ದೂರಿದರು.
ಹದ್ದುಬಸ್ತು ಸಮೀಕ್ಷೆ: ಒಟ್ಟು ಆಶ್ರಯ ಮನೆಗಳ ಪೈಕಿ ಶೇ.80ರಷ್ಟು ಸ್ಥಿತಿವಂತರ ಪಾಲಾಗಿವೆ. ಹಕ್ಕುಪತ್ರಗಳನ್ನು ಪಡೆದವರು ಆಶ್ರಯ ಕಾಲನಿಯಲ್ಲಿ ವಾಸವಾಗಿಲ್ಲ. ಹಳೆಯ ಆಶ್ರಯ ಕಾಲನಿಯ 206 ಮನೆಗಳಲ್ಲಿ 23 ಮನೆಗಳಿಗೆ ಬೀಗ ಹಾಕಲಾಗಿದೆ. ನಗರದ ವಿವಿಧೆಡೆಯ ಆಶ್ರಯ ಮನೆಗಳಲ್ಲಿ ನಿರಾಶ್ರಿತರೇ ವಾಸವಾಗಿದ್ದಾರೆ. ಅವರು ಆಧಾರ್, ಪಡಿತರ ಚೀಟಿ, ಮತದಾರರ ಚೀಟಿ ಹೊಂದಿರುವುದು ಅವರು ವಾಸವಾಗಿರುವ ಮನೆಗಳ ಬಗ್ಗೆ ಪುರಾವೆಯಾಗಿದೆ ಎಂದು ತಿಳಿಸಿದರು.
ನಗರದಲ್ಲಿ ನಿರ್ಮಿಸಿದ ಆಶ್ರಯ ಮನೆಗಳನ್ನು ಕಳೆದ 2008ರಿಂದ ಬಡವರಿಗೆ ವಿತರಿಸಬೇಕು. ಹಕ್ಕುಪತ್ರ ನೀಡಿ ಬದುಕಿಗೆ ಆಸರೆ ಕಲ್ಪಿಸುವಂತೆ ಕರ್ನಾಟಕ ರೈತ ಸಂಘವು ನಿರಂತರ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಘಟನೆಯು ನಗರಸಭೆ ಎದುರು ಸತತ 385 ದಿನ ಧರಣಿ ನಡೆಸಿದಾಗ ಅಧಿಕಾರಿಗಳು ಆಶ್ರಯ ಕಾಲನಿಯ ಹದ್ದುಬಸ್ತು ಸಮೀಕ್ಷೆ ಮಾಡಿಸಿದ್ದಾರೆ.
ನಿರಾಶ್ರಿತರ ಹೆಸರಿಗೆ ಸಕ್ರಮಕ್ಕೆ ಒತ್ತಾಯ: ವಿವಿಧ ಸವಲತ್ತು ಹೋರಾಟದ ಮೂಲಕ ಪಡೆಯಲಾಗಿದೆ. ಆದರೆ ಹಕ್ಕುಪತ್ರ ಹೊಂದಿದ ಶ್ರೀಮಂತರು ಆಶ್ರಯ ಕಾಲನಿಯಲ್ಲಿನ ತಮ್ಮ ಮನೆಗಳಿರುವ ಜಾಗ ಮಾರಾಟಕ್ಕೆ ಮುಂದಾಗಿದ್ದು, ಅದಕ್ಕೆ ನಗರಸಭೆಯ ಅಧಿಕಾರಿಗಳೂ ಬೆಂಬಲಿಸುತ್ತಿದ್ದಾರೆಂದು ದೂರಿದರು.
ರಾಜ್ಯದಲ್ಲಿ ನಡೆದಿರುವ ಅತೀ ದೊಡ್ಡ ವಸತಿ ಯೋಜನೆಯ ಅಕ್ರಮ ಇದಾಗಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಆಶ್ರಯ ಕಾಲನಿಯಲ್ಲಿ ವಾಸವಾಗಿರುವ ನಿರಾಶ್ರಿತರ ಮನೆಗಳಿಗೆ ಸಂಖ್ಯೆ ನೀಡಿ ಗುರುತಿಸಿ, ಮನೆ ಹಾಗೂ ಜಾಗವನ್ನು ನಿರಾಶ್ರಿತರ ಹೆಸರಿಗೆ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.
ಆಶ್ರಯ ಮನೆ, ನಿವೇಶನ ಹಂಚಿಕೆಯ ಹಗರಣದ ಮೇಲೆ ತನಿಖೆ ನಡೆಸಿ ನಕಲಿ ಫಲಾನುಭವಿಗಳಿಗೆ ನೀಡಿದ ಹಕ್ಕುಪತ್ರ ರದ್ದು ಪಡಿಸಬೇಕು. ಆಶ್ರಯ ಕಾಲನಿಯ ವಿದ್ಯುತ್, ಕುಡಿಯುವ ನೀರು, ರಸ್ತೆ ಹಾಗೂ ಚರಂಡಿಗೆ ವೆಚ್ಚ ಮಾಡಿದ ಅಕ್ರಮದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement