ಅತ್ಯಾಚಾರಕ್ಕೆ ಯತ್ನ: ಗೂಸಾ
ಸಿಂಧನೂರು: ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನಿಗೆ ಸಾರ್ವಜನಿಕರು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮೂರುಮೈಲ್ ಕ್ಯಾಂಪ್ನಲ್ಲಿ ನಡೆದಿದೆ. ಇಲ್ಲಿನ ರಂಭಾಪುರಿ ಖಾಸಾಶಾಖಾ ಮಠದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳ ಮೇಲೆ ಇಬ್ಬರು ಯುವಕರು ಮಠದಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಕುಡಿಯಲು ನೀರು ಕೇಳುವವರಂತೆ ನಾಟಕವಾಡಿ, ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದರಿಂದ ಎಚ್ಚೆತ್ತ ಮಹಿಳೆ ಪ್ರತಿರೋಧವೊಡ್ಡಿ ಚೀರಿದ್ದಾಳೆ. ಮಠದ ಮುಂಭಾಗದಲ್ಲಿದ್ದ ನಾಯಿಯೊಂದು ಗಲಾಟೆಗೆ ಬೊಗಳಲು ಶುರುವಿಟ್ಟುಕೊಂಡಿದೆ. ಇದರಿಂದ ವಿಚಲಿತಗೊಂಡ ದುಷ್ಕರ್ಮಿಗಳು ನಾಯಿ ಬೆನ್ನಟ್ಟುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿ ಹೋದರೆಂದು ತಿಳಿದು ಬಂದಿದೆ. ಆ ನಂತರ ಬೆಳಿಗ್ಗೆ ಎಲ್ಲರಿಗೂ ವಿಷಯ ಗೊತ್ತಾಗಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಮೂರುಮೈಲ್ ಕ್ಯಾಂಪ್ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.