'ಗುಣಮಟ್ಟದ ಶಿಕ್ಷಣದಿಂದ ಪ್ರಗತಿ'
ರಾಯಚೂರು: ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ. ಇಂಥ ಅಭಿವೃದ್ಧಿ ಪರ ಚಿಂತನೆಯನ್ನು ಹೊಂದಿದ್ದ ಪಂ.ತಾರಾನಾಥರು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಈ ಭಾಗದಲ್ಲಿ ಶೈಕ್ಷಣಿಕ ಕೊರತೆ ನೀಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆಂದು ಎಲ್‌ವಿಡಿ ಕಾಲೇಜಿನ ಉಪನ್ಯಾಸಕ ಡಾ. ಚನ್ನಬಸಯ್ಯ ಹಿರೇಮಠ ಹೇಳಿದರು.
ನಗರದ ಹಮ್‌ದರ್ದ್ ಪ್ರೌಢಶಾಲೆಯಲ್ಲಿ ಶುಕ್ರವಾರ ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಪಂಡಿತ ತಾರಾನಾಥರ 123ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಶಿಕ್ಷಣ ಸಂಸ್ಥೆ: ರಾಯಚೂರಿನಲ್ಲಿ 1920ರಲ್ಲೇ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಅವರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಜನರಲ್ಲಿದ್ದ ಅನಕ್ಷರತೆ ಹೋಗಲಾಡಿಸುವ ಪ್ರಯತ್ನ ಆರಂಭಿಸಿದ್ದರು. ತಾರಾನಾಥರು ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಸ್ವದೇಶಿ ಶಿಕ್ಷಣ, ಸಂಸ್ಕೃತಿ ರಕ್ಷಣೆ ಕಾರ್ಯ ಮಾಡಿದರು ಎಂದು ಕೊಂಡಾಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಮುಂಬರುವ ದಿನಗಳಲ್ಲಿ ಶಿಕ್ಷಣ ಸಂಸ್ಥೆಯ ಕಿರುಹೊತ್ತಿಗೆ ಜಾರಿಗೆ ತಂದು ಮಕ್ಕಳಿಗೆ ವಿತರಿಸಲಾಗುತ್ತದೆ. ಜತೆಗೆ 6 ಕೋಟಿ ರು. ವೆಚ್ಚದ ನೂತನ ಪ್ರೌಢಶಾಲೆ ನಿರ್ಮಿಸಲಾಗುತ್ತದೆ ಎಂದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಸ್ಕಿ ನಾಗರಾಜ, ಪಾರಸಮಲ್ ಬೋರಾಜಿ, ಎನ್. ಶ್ರೀನಿವಾಸ್ ಹಾಗೂ ತಾರಾನಾಥ ಶಿಕ್ಷಣ ಸಂಸ್ಥೆ ಸದಸ್ಯರು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.