ಜಾನಪದ ಕಲಾವಿದರ ಸಮೀಕ್ಷೆಗೆ ಅಕಾಡೆಮಿ ಸಿದ್ಧತೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಜಾನಪದ ಕಲಾವಿದರ ಮಾಹಿತಿ ಸಂಗ್ರಹ ಮತ್ತು ಸ್ಥಿತಿಗತಿ ಅರಿಯಲು ರಾಜ್ಯ ಜಾನಪದ ಅಕಾಡೆಮಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಳ್ಳಲು ಯೋಜಿಸಿದೆ. ಕೋಲಾರ ಜಿಲ್ಲೆಯಲ್ಲಿ ಮೊಟ್ಟ ಮೊದಲಿಗೆ ಪ್ರಾಯೋಗಿಕವಾಗಿ ಇಂಥ ಸಮೀಕ್ಷೆ ನಡೆಸಲಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.
ಅವರು ರಾಯಚೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರತಿಯೊಂದೂ ಜಿಲ್ಲೆಯಲ್ಲಿ ಜಾನಪದ ಕಲಾವಿದರಿದ್ದು ಅವರಿಗೆ ಸರ್ಕಾರದ ವಿವಿಧ ಸೌಲತ್ತುಗಳು ದೊರೆಯುತ್ತಿಲ್ಲ. ಜಾನಪದ ಕಲೆಗಳೂ ನಶಿಸುತ್ತಿರುವ ಈ ದಿನಗಳಲ್ಲಿ ಅಂಥವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕಲಾವಿದರ ಮಾಹಿತಿ ಸಂಗ್ರಹ ಮೂಲಕ ಅವರ ನೆರವಿಗೆ ಅಕಾಡೆಮಿ ಮುಂದಾಗಲಿದೆ ಎಂದು ಹೇಳಿದರು.
ಕಲಿಕಾ ಕೇಂದ್ರ: ಸಮೀಕ್ಷೆ ವೇಳೆ ಕಲಾವಿದರು ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸೌಲತ್ತುಗಳು, ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ನಡೆಸಲಾಗುತ್ತದೆ. ನಶಿಸುತ್ತಿರುವ ಜಾನಪದ ಕಲೆಗಳ ಸಂರಕ್ಷಣೆಗೆ ಗುರುಶಿಷ್ಯರು ಪರಂಪರೆಯ ಮಾದರಿಯಲ್ಲಿ ರಾಜ್ಯದ ವಿವಿಧೆಡೆ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು. ರಾಯಚೂರಿನಲ್ಲಿ ಇಂಥ ಕಲಿಕಾ ಕೇಂದ್ರ ಮೊದಲಿಗೆ ಸ್ಥಾಪಿಸಲಾಗುತ್ತದೆ. ಎಸ್ಸಿ, ಎಸ್ಟಿ ಜನಾಂಗದ ಆಸಕ್ತರಿಗೆ ಜಾನಪದ ಕಲೆಗಳನ್ನು ಮೂರು ತಿಂಗಳ ಅವಧಿಯ ತರಬೇತಿಯಲ್ಲಿ ಕಲಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಸೂಕ್ತ ಸಂಭಾವನೆ ನೀಡಲಾಗುತ್ತದೆ ಎಂದು ತಿಳಿಸಿದರು. ಅದೇ ರೀತಿ ರಾಜ್ಯದ ಎರಡು ಕಡೆ ಚರ್ಮವಾದ್ಯಗಳ ತಯಾರಿಕೆ ಮತ್ತು ಬಳಕೆ ಕುರಿತು 10 ದಿನಗಳ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪ್ರತಿಯೊಂದೂ ಜಿಲ್ಲೆಯಿಂದ ಒಬ್ಬರನ್ನು ಈ ಶಿಬಿರಕ್ಕೆ ಕರೆಯಿಸಿ ತರಬೇತಿ ನೀಡಲಾಗುತ್ತದೆ. ಮೂಲ ಜಾನಪದ ಕಲೆಯನ್ನು ರಕ್ಷಿಸುವುದು ಅಕಾಡೆಮಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಅಕಾಡೆಮಿಗೆ ಸರ್ಕಾರ ಕಳೆದ ವರ್ಷ 65 ಲಕ್ಷ ನೀಡಿತ್ತು. ಈ ವರ್ಷ 1 ಕೋಟಿ ಮಂಜೂರು ಮಾಡಿದ್ದು, ರಾಜ್ಯದಲ್ಲಿ ಸಾವಿರಾರು ಸಂಖ್ಯೆಯ ಕಲಾವಿದರಿದ್ದು, ಒಟ್ಟು ವಿವಿಧ 147 ಕಲಾ ಪ್ರಕಾರಗಳಿವೆ. ಕಲಾವಿದರಿಗೆ ಸರ್ಕಾರದಿಂದ ಪಿಂಚಣಿ ದೊರೆಯುತ್ತಿದ್ದು, ಇನ್ನೂ ಅನೇಕರಿಗೆ ಪಿಂಚಣಿ ಸೌಲಭ್ಯ ದೊರಕಿಸುವ ಕಾರ್ಯ ಅಕಾಡೆಮಿ ಮಾಡಲಿದೆ ಎಂದು ತಿಳಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯ ಸರ್ಕಾರ ಕಲಾವಿದರಿಗೆ ನೀಡುತ್ತಿದ್ದ ಪಿಂಚಣಿ ಸೌಲಭ್ಯ ಸ್ಥಗಿತಗೊಳಿಸಿತ್ತು. ಆದರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಲಾವಿದರ ಬಾಕಿಯಿದ್ದ ಪಿಂಚಣಿ ಅರ್ಜಿಗಳಿಗೆ ಮಂಜೂರಾತಿ ನೀಡಿದೆ. ತಲಾ 1 ಸಾವಿರ ಪಾವತಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕಲಾವಿದರೊಂದಿಗೆ ಅಕಾಡೆಮಿಯು ನಿರಂತರ ಸಂಪರ್ಕವಿರಿಸಿಕೊಂಡು ಅವರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಾನಪದ ಕಲಾಮೇಳ ಆಯೋಜಿಸಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಸದಸ್ಯ ಶರಣಪ್ಪ ಗೋನಾಳ್ ಸೇರಿ ಅನೇಕರಿದ್ದರು.