ಬಸ್‌ಪಾಸ್ ವಿತರಣೆಗೆ ಒತ್ತಾಯ
ಸಿಂಧನೂರು: ಬಸ್ ಪಾಸ್ ವಿತರಣೆ ವಿಳಂಬದಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುತ್ತಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶೀಘ್ರ ಬಸ್ ಪಾಸ್ ವಿತರಣೆ ಮಾಡಬೇಕು ಎಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ದಿದ್ದಗಿ ಒತ್ತಾಯಿಸಿದ್ದಾರೆ.
ಹಣ ಖರ್ಚು: ಈ ಕುರಿತು ಹೇಳಿಕೆ ನೀಡಿರುವ ಅವರು, ಬಳಗಾನೂರು, ತುರ್ವಿಹಾಳ, ಜವಳಗೇರಾ, ರೌಡಕುಂದಾ, ಜಾಲಿಹಾಳ, ಗಾಂಧಿನಗರ, ಹಿರೇಭೇರಿಗಿ, ಹತ್ತಿಗುಡ್ಡ, ಒಳಬಳ್ಳಾರಿ, ಬೆಳಗುರ್ಕಿ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೇ ಇರುವುದರಿಂದ ದಿನವೂ ಪ್ರಯಾಣಕ್ಕೆ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿ ಬಾರಿಯೂ ಸರ್ಕಾರ ಸಾರಿಗೆ ಇಲಾಖೆಗೆ ಶಾಲಾ-ಕಾಲೇಜ್ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲು ಸೂಕ್ತ ನಿರ್ದೇಶನ ನೀಡದೇ ಉದಾಸೀನತೆ ತಾಳಿದೆ. ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ಅನೇಕ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಾರದೊಳಗೆ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.