ಬಿಟಿ ಹತ್ತಿ- ರೈತರಿಗೆ ಕೃಷಿ ಇಲಾಖೆ ಸಲಹೆ
ರಾಯಚೂರು: ಮುಂಗಾರು ಹಂಗಾಮಿಗೆ ರಾಯಚೂರು ತಾಲೂಕಿನಾದ್ಯಂತ ಬಿಟಿ ಹತ್ತಿ ಬೀಜಗಳ ಮಾರಾಟ ಖಾಸಗಿ ಅಂಗಡಿಗಳಲ್ಲಿ ಆರಂಭವಾಗಿದ್ದು, ಎಲ್ಲ ತಳಿಗಳ ಬೀಜಗಳು ಉತ್ಪಾದಕ ಸಂಸ್ಥೆಗಳ ಮಾರಾಟ ನಿಯಮಗಳಿಗೆ ಅನುಗುಣವಾಗಿ ಲಭ್ಯವಿರುತ್ತವೆ ಎಂದು ಕೃಷಿ ಇಲಾಖೆ ತಿಳಿಸಿದೆ. ರೈತರು ತಮ್ಮ ಅನುಭವ ಆಧರಿಸಿ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚಿನ ಪ್ರಚಾರವುಳ್ಳ ಕಂಪನಿಗಳ ಬೀಜಗಳಿಗೆ ಎಲ್ಲ ರೈತರು ಮಾರು ಹೋದಲ್ಲಿ ಮಾರುಕಟ್ಟೆಯಲ್ಲಿ ಬೀಜಗಳ ಕೊರತೆಯುಂಟಾಗುವುದಲ್ಲದೆ ಬೇಡಿಕೆ ಪೂರೈಸುವ ನೆಪದಲ್ಲಿ ಕಡಿಮೆ ಗುಣಮಟ್ಟದ ಬೀಜಗಳನ್ನು ಬೆರೆಸಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದೆ. ಕಳಪೆ ಬಿತ್ತನೆ ಬೀಜಗಳ ಬಳಕೆಯಿಂದ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಆದ್ದರಿಂದ ರೈತರು ಪ್ರಸ್ತುತ ಉತ್ತಮ ತಳಿಯ ಬೀಜಗಳನ್ನು ಮಾರುಕಟ್ಟೆಯಲ್ಲಿ ನಿಗದಿಪಡಿಸಿದ ದರದಲ್ಲಿ ಖರೀದಿಸಿ ಬಿತ್ತನೆ ಕೈಗೊಳ್ಳಬೇಕು. ಕೆಲವು ಸಾರಿ ಕೆಲವು ಬಿಟಿ ತಳಿಗಳು ನೀರಿಕ್ಷಿತ ಇಳುವರಿ ನೀಡದೆ ಮಳೆಯ ಕೊರತೆಯಿಂದ ಹತ್ತಿ ಬೆಳೆ ವಿಫಲವಾಗುವ ಸಾಧ್ಯತೆ ಇದ್ದು, ನೀರಿನ ಸೌಲಭ್ಯವಿದ್ದಲ್ಲಿ ಇಳುವರಿ ಉತ್ತಮವಾಗುತ್ತವೆ. ಇದಲ್ಲದೆ ರೈತರು ಬೀಜಗಳನ್ನು ಖಾಸಗಿ ಮಾರಾಟಗಾರರಿಂದ ಖರೀದಿಸುವಾಗ ತಪ್ಪದೇ ನಿಗದಿತ ಮೂಲ ದರದಲ್ಲಿ ಖರೀದಿ ಮಾಡಿ ಕಡ್ಡಾಯವಾಗಿ ರಸೀದಿಗಳನ್ನು ಕಾಯ್ದಿರಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಡಾ. ಸಂದೀಪ್ ಮನವಿ ಮಾಡಲಾಗಿದೆ.