ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೊಟೇಲ್ ತಿಂಡಿಯಲ್ಲಿ ಹುಳು: ಆಕ್ರೋಶ

Mainashree
Updated On : 7 Jun 2014, 10:14 am

ಸಿಂಧನೂರು: ನಗರದ ತಹಸೀಲ್ದಾರ್ ಕಾರ್ಯಾಲಯದ ಬಳಿ ಇರುವ ಗುರುಪ್ರಸಾದ ಹೊಟೇಲ್‌ನಲ್ಲಿ ಆಹಾರ ಸ್ವಚ್ಛತೆ ಬಗ್ಗೆ ಮಾಲಿಕರು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದು, ಗ್ರಾಹಕರೊಬ್ಬರು ಇಡ್ಲಿ ಸೇವನೆ ಸಂದರ್ಭದಲ್ಲಿ ಚಟ್ನಿಯಲ್ಲಿ ಹುಳು ಸಿಕ್ಕಿದ ಘಟನೆ ಜರುಗಿದೆ.  ಬೆಳಗ್ಗೆ ಉಪಹಾರ ಮಾಡಲೆಂದು ಹೋಗಿದ್ದ ಗ್ರಾಹಕರೊಬ್ಬರು ಇಡ್ಲಿ ಆರ್ಡರ್ ಮಾಡಿದ್ದಾರೆ. ಸಪ್ಲೆಯರ್ ಇಡ್ಲಿ ತಂದು ಕೊಟ್ಟಿದ್ದು, ತಿನ್ನುವ ಸಂದರ್ಭದಲ್ಲಿ ಚಟ್ನಿಯಲ್ಲಿ ಏನೋ ಹೊರಳಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಅಚ್ಚರಿಗೊಳಗಾದ ಗ್ರಾಹಕ ಅದನ್ನು ಪಕ್ಕಕ್ಕೆ ಸರಿಸಿ ನೋಡಿದಾಗ, ಹುಳು ಎಂಬುದು ಗೊತ್ತಾಗಿದೆ. ಕೂಡಲೇ ವಿಷಯವನ್ನು ಹೊಟೇಲ್ ಮಾಲೀಕರಿಗೆ ತಿಳಿಸಿದ್ದಾರೆ. ಆಕ್ರೋಶ: ಈ ಬಗ್ಗೆ ಪ್ರತಿಕ್ರಿಯಿಸಿದ ಮಾಲೀಕ ಇರಲಿ ಬಿಟ್ಟು ಬಿಡಿ, ವಿಷಯ ದೊಡ್ಡದು ಮಾಡಬೇಡಿ ಎಂದು ಸಮಜಾಯಷಿ ನೀಡಿದ್ದಾರೆ. ಇದರಿಂದ ಕುಪಿತನಾದ ಗ್ರಾಹಕ ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಉಪಹಾರದಲ್ಲಿ ಹುಳು ಇರುವ ವಿಷಯ ಆರೋಗ್ಯ ಇಲಾಖೆಯವರಿಗೆ ತಿಳಿಸಲಾಗಿದೆ.
ಪರಿಶೀಲನೆ: ಸ್ಥಳಕ್ಕೆ ದೌಡಾಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನ್ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ್ ಅವರ ತಂಡ ಉಪಹಾರ ಪರೀಕ್ಷಿಸಿದೆ. ಹುಳು ಇರುವುದು ಖಾತರಿಯಾಗಿದ್ದು, ಈ ಕುರಿತು ದೂರು ಪಡೆದು ಭಾವಚಿತ್ರ ಸಮೇತ ಮೇಲಾಧಿಕಾರಿಗಳು ಕಳುಹಿಸಲಾಗುವುದು ಎಂದು ತಿಳಿಸಿದರು. ನಂತರ ಗುರುಪ್ರಸಾದ ಹೊಟೇಲ್‌ನಲ್ಲಿ ಇರುವ ವಾಷ್ ಬೇಸಿನ್ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿದಾಗ, ಎಲ್ಲೆಡೆ ಅವ್ಯವಸ್ಥೆ ತಾಂಡವವಾಡುತ್ತಿರುವುದು ಕಂಡು ಬಂತು. ಕುಡಿಯುವ ನೀರಿನ ತೊಟ್ಟಿಯನ್ನು ಸಹ ತಾಲೂಕ ಆರೋಗ್ಯಾಧಿಕಾರಿಗಳು ಪರಿಶೀಲಿಸಿದರು. ಕೂಡಲೇ ಎಲ್ಲವನ್ನು ಸ್ವಚ್ಛಗೊಳಿಸಬೇಕು. ಹುಳು ಕಂಡು ಬಂದಿರುವ ಚಟ್ನಿಯನ್ನು ಚೆಲ್ಲಬೇಕು ಎಂದು ಹೊಟೇಲ್ ಮಾಲೀಕರಿಗೆ ಸೂಚಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement