ಅಕ್ರಮ ಮರಳು ಸಾಗಾಟಕ್ಕೆ ತಡೆ
ಕ.ಪ್ರ. ವಾರ್ತೆ ್ಣ ಮುದಗಲ್ ್ಣ ಜೂ.8
ಜಿಲ್ಲೆಯಲ್ಲಿಯ ಅಕ್ರಮ ಮರಳು ಸಾಗಾಟಕ್ಕೆ ಇನ್ನು ಮುಂದೆ ಪೊಲೀಸ್ ಇಲಾಖೆ ದಾಳಿ ಮಾಡಿ ದಂಡ ವಿಧಿಸುವ ಕಾನೂನು ಸರಕಾರ ಜಾರಿಗೆ ತಂದಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಸ್ಕಿ ವೃತ್ತದ ಪೊಲೀಸ್ ಸಿಬ್ಬಂದಿಯ ವರ್ಗಾವಣೆಯ ಕೌನ್ಸಿಲಿಂಗ್ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಅಕ್ರಮ ಮರಳು ತಡೆ ವಿಷಯದಲ್ಲಿ ಕಂದಯ ಇಲಾಖೆ ಅಧಿಕಾರಿಗಳು ಮಾತ್ರ ದಾಳಿ ಮಾಡುತ್ತಿದ್ದಾರೆ. ತಮ್ಮ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದೇಕೆ ಎನ್ನುವ ಪತ್ರಕರ್ತರ ಪ್ರಶ್ನೆಗೆ, ಸರ್ಕಾರ ನೂತನವಾಗಿ ಒಂದು ವಾರದ ಹಿಂದೆ ಆದೇಶ ನೀಡಿದೆ. ಸಿಪಿಐನಿಂದ ಎಸ್ಪಿವರೆಗಿನ ಅಧಿಕಾರಿಗಳು ವೈಯಕ್ತಿಕವಾಗಿ ದಾಳಿ ಮಾಡಿ ದಂಡ ವಿಧಿಸಬಹುದಾಗಿದೆ.
ದಾಳಿಗೆ ಸೂಚನೆ: ಸ್ಥಳದಲ್ಲಿದ್ದ ಸಿಪಿಯ ಸತ್ಯನಾರಾಯಣ ಅವರನ್ನು ಕರೆದು ನೀವ್ಯಾಕೆ ಮರಳು ಸಾಗಾಟ ವಾಹನಗಳನ್ನು ದಾಳಿ ಮಾಡುತ್ತಿಲ್ಲ ಎಂದು ಕೇಳುತ್ತಿದ್ದಂತೆ, ಇಲ್ಲ ಸರ್, ತಹಸೀಲ್ದಾರರು ಮತ್ತು ನಾವು ಜಂಟಿಯಾಗಿ ದಾಳಿ ಮಾಡಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಇನ್ನು ಮುಂದೆ ಜಂಟಿ ಬೇಡ. ಒಂಟಿಯಾಗಿ ದಾಳಿ ಮಾಡಿ. ದಂಡದ ರಸೀದಿ ಪುಸ್ತಕಗಳನ್ನು ಕಳಿಸಲಾಗುವುದು. ಒಂಟಿಯಾಗಿ ದಾಳಿ ಮಾಡಿ ದಂಡ ವಿಧಿಸಿ ಎಂದು ಮೌಖಿಕವಾಗಿ ಆದೇಶಿಸಿದರು.
ಅಪಘಾತ ತಡೆಗೆ ಯತ್ನ: ವರ್ಗಾವಣೆ ಕುರಿತಂತೆ ಶೀಘ್ರವೇ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಅಪಘಾತಗಳನ್ನು ತಪ್ಪಿಸಲು ಅಪಘಾತ ವಲಯಗಳಲ್ಲಿ ಸೂಚನಾ ಫಲಕಗಳನ್ನು ಹಾಕಲು ಇಲಾಖೆ ಪ್ರಯತ್ನದಲ್ಲಿದೆ. ಜೊತೆಗೆ ಪಿಡಬ್ಲ್ಯುಡಿ ಇಲಾಖೆ ಗಮನ ಸೆಳೆದು ಹಾಕಿಸಲು ಪ್ರಯತ್ನಿಸಲಾಗಿದೆ. ಇನ್ನು ಅಪಘಾತಕ್ಕೆ ಅವೈಜ್ಞಾನಿಕವಾಗಿ ರೋಡ್ ಹಂಪ್ಸ್ ಹಾಕಿರುವುದು ಕೂಡ ಗಮನಕ್ಕೆ ಬಂದಿದೆ. ಅವಶ್ಯವಿದ್ದಲ್ಲಿ ರೋಡ್ ಹಂಪ್ಸ್ ಇಟ್ಟು ಉಳಿದೆಡೆ ತೆರವುಗೊಳಿಸಲು ಚರ್ಚಿಸಲಾಗುವುದು ಎಂದರು.
ಟ್ರ್ಯಾಕ್ಟರ್ ಟ್ರ್ಯಾಲಿ ಮತ್ತು ಚಕ್ಕಡಿಗಳಿಗೆ ಕೆಂಪು ರೇಡಿಯಂ ಇರದ ಪ್ರಯುಕ್ತ ಅಪಘಾತಗಳು ಸಂಭವಿಸುತ್ತವೆ. ಈ ಕುರಿತಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಹಣ ಮಂಜೂರು: ಮುದಗಲ್ ಪೊಲೀಸ್ ಠಾಣೆಯ ಶಿಥಿಲಗೊಂಡಿದ್ದರಿಂದ ನೂತನ ಠಾಣೆ ನಿರ್ಮಾನಕ್ಕೆ ಸರ್ಕಾರದಿಂದ ರು. 65 ಲಕ್ಷ ಮಂಜೂರಾಗಿದ್ದು, ನಿವೇಶನ ಅಥವಾ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ ತಿಂಗಳೊಳಗಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಈ ಸಮಯದಲ್ಲಿ ಮಸ್ಕಿ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣರಾವ್, ಪಿಎಸ್ಐ ಸಂಗಮೇಶ ಶಿವಯೋಗಿ, ಮಸ್ಕಿ ಪಿಎಸ್ಐ ಗುರುರಾಜ ಕಟ್ಟಿಮನಿ ಉಪಸ್ಥಿತರಿದ್ದರು.