ಏತ ನೀರಾವರಿ ಕಾಲುವೆ ದುರಸ್ತಿಗೆ 3 ಕೋಟಿ
ಲಿಂಗಸ್ಗೂರು: ನಾರಾಯಣಪೂರ ಜಲಾಶಯದ ಹಿನ್ನೀರು ಬಳಸಿಕೊಂಡು ನೀರಾವರಿ ಸೌಲಭ್ಯ ಕಲ್ಪಿಸಿದ ರಾಂಪೂರ ಏತನೀರಾವರಿ ಯೋಜನೆ ಮುಖ್ಯ ಕಾಲವೆ, ವಿತರಣಾ ಕಾಲುವೆ ಹಾಗೂ ಸಿಡಿಗಳ ರಿಪೇರಿ ಕಾರ್ಯಕ್ಕೆ 3 ಕೋಟಿ ಬಿಡುಗಡೆ ಮಾಡಲಾಗಿದೆ.
ಕಾಲುವೆಗಳ ಹೂಳೆತ್ತುವುದು, ಜಂಗಲ್ ಕಟಿಂಗ್ಗೆ 2.10 ಕೋಟಿ ಹಾಗೂ ನಾಲೆಗಳ ರಿಪೇರಿ ಕೆಲಸಕ್ಕೆ 1.50 ಕೋಟಿ ಬಿಡುಗಡೆ ಮಾಡಲಾಗಿದ್ದು, 1ರಿಂದ 7 ಲಕ್ಷ ವರೆಗಿನ ಒಟ್ಟು 104 ವಿಶೇಷ ದುರಸ್ತಿ ಹಾಗೂ ಕ್ಲೋಸರ್ ಕೆಲಸ ಕೈಗೆತ್ತಿಗೊಳ್ಳಲಾಗಿದೆ. ರಿಪೇರಿ ಕೆಲಸ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ನವಲಿ ಮುಖ್ಯ ಸ್ಥಾವರದಿಂದ ಮುಖ್ಯ ನಾಲೆ 20ನೇ ಕಿ.ಮೀ. ವರೆಗೆ ಬಹುತೇಕ ನಾಲೆಹಾಳಾಗಿದ್ದು, ಮುಳ್ಳುಗಂಟಿಗಳು ಬೆಳೆದು ನಿಂತಿವೆ. ನಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ಕೃಷ್ಣಾ ಭಾಗ್ಯ ಜಲನಿಗಮ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ಹಣ ಬಿಡುಗಡೆ ಮಾಡಲಾಗಿದೆ.