ಕೋಮಲಾಪುರ ಗ್ರಾಮಕ್ಕೆ ನೀರು ಸರಬರಾಜು ಬಂದ್ ಎಚ್ಚರಿಕೆ
ಪಂಪಯ್ಯ ಮಠ
ಮುದಗಲ್: ಪಕ್ಕದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೊನೆಯ ಹಳ್ಳಿ ಸೋಮಲಾಪುರದಿಂದ ಲಿಂಗಸ್ಗೂರು ತಾಲೂಕಿನ ಕೊನೆ ಹಳ್ಳಿ ತುರಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೊಳಿಸುವವರೆಗೆ ಸೋಮಲಾಪುರ ಗ್ರಾಮದಿಂದ ಕೋಮಲಾಪುರ ಗ್ರಾಮಕ್ಕೆ ಕುಡಿಯುವ ನೀರು ಸಬರಾಜು ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸೋಮಲಾಪುರ ಗ್ರಾಮದಿಂದ ತುರಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 33 ಫೀಟ್ ಅಗಲದ 4 ಕಿ.ಮೀ. ರಸ್ತೆಯನ್ನು ಇಲ್ಲಿವರೆಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತುರಡಗಿ ಗ್ರಾಮಕ್ಕೆ ಬರಬೇಕಾದರೆ 8 ಕಿ.ಮೀ. ದೂರದಿಂದ ಸುತ್ತುವರಿದು ಬರಬೇಕು. ಕೇವಲ 4 ಕಿ.ಮಿ.ರಸ್ತೆ ದುರಸ್ತಿಗೊಳಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಏನು ಪ್ರಯೋಜನೆಯಾಗಿಲ್ಲ.
ಸಂಪರ್ಕ ದೂರ: ರಸ್ತೆ ಸಮಸ್ಯೆಯಿಂದ ಹುನಗುಂದ ತಾಲೂಕಿನ ಹಳ್ಳಿಗಳಿಗೆ ಮತ್ತು ಲಿಂಗಸ್ಗೂರು ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ದೂರಾಗಿದೆ. ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್, ಜಿ.ಪಂ. ಸದಸ್ಯರು, ತಾ.ಪಂ.ಸದಸ್ಯರಿಗೂ ಮನವಿ ಮಾಡಲಾಗಿದೆ.
ನೀರು ಸ್ಥಗಿತ: ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದಾರೆ. ಆದ್ದರಿಂದ ಸೋಮಲಾಪುರ ಗ್ರಾಮದಿಂದ ಕೋಮಲಾಪುರ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಮುಖಂಡ ಶರಣಗೌಡ ಪತ್ರಿಕೆಗೆ ತಿಳಿಸಿದ್ದಾರೆ.