ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರಿಗೆ ಆಗ್ರಹಿಸಿ ಧರಣಿ

Vishwanath S
Updated On : 10 Jun 2014, 12:30 pm

ಕ.ಪ್ರ. ವಾರ್ತೆ ,  ರಾಯಚೂರು ,  ಜೂ. 9
ನಗರದ ಜನತೆಗೆ ಪ್ರತಿದಿನವೂ ಸಮರ್ಪಕ ಕುಡಿಯುವ ನೀರೊದಗಿಸುವಂತೆ ಆಗ್ರಹಿಸಿ ಕುಡಿಯುವ ನೀರಿನ ನಿರ್ವಹಣೆ ಜಾಗೃತಿ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಧರಣಿ ನಡೆಸಿದರು.
ನಗರದ ನಗರಸಭೆ ಕಚೇರಿ ಎದುರು ಧರಣಿ ನಡೆಸಿದ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ನಗರಸಭೆಗೆ ಜನಪರ ಕಾಳಜಿ ಇಲ್ಲವಾಗಿದೆ. ಕಳೆದ ಆರು ವರ್ಷಗಳಿಂದ ನಗರದ ಜನತೆ ಬೇಸಿಗೆ ಸೇರಿದಂತೆ ಸರ್ವಕಾಲಕ್ಕೂ ಕುಡಿಯುವ ನೀರಿನ ಕೃತಕ ಅಭಾವ ಎದುರಿಸುವಂತೆ ಆಡಳಿತ ಮಾಡಿದೆ. ವರ್ಷದಲ್ಲಿ ಎಂಟು ತಿಂಗಳು ಎರಡು ದಿನಕ್ಕೊಮ್ಮೆ ಜನತೆಗೆ ನೀರೊದಗಿಸಲಾಗುತ್ತಿದೆ ಎಂದು ಟೀಕಿಸಿದರು.
ರಾಜಕೀಯ ಪ್ರಭಾವ: ಕೃಷ್ಣಾ ನದಿಯಿಂದ ನಗರಕ್ಕೆ ಕುಡಿವ ನೀರೊದಗಿಸುವ ಕೊಳವೆ ಮಾರ್ಗದಲ್ಲಿ ವಿವಿಧ ಗ್ರಾಮ ಹಾಗೂ ಕೈಗಾರಿಕೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ನಗರದಲ್ಲಿ ಸಹ ಹೊಟೇಲ್‌ಗಳು, ನಗರಸಭೆ ಸದಸ್ಯರು, ರಾಜಕೀಯ ಪ್ರಭಾವವಿರುವ ವ್ಯಕ್ತಿಗಳ ಮನೆಗೆ ಮುಖ್ಯ ಕೊಳವೆಯಿಂದ ನೇರ ಸಂಪರ್ಕ ಕಲ್ಪಿಸಿದ್ದು, ಅದರಿಂದ ಜನಸಾಮಾನ್ಯರಿಗೆ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ನಗರದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ವೇಳೆ ನೀರಿನ ತೊಟ್ಟಿಗೆ ನೀರು ಭರ್ತಿ ಮಾಡಿದ ನಂತರ ಮನೆಗಳಿಗೆ ನೀರು ಪೂರೈಸಬೇಕು. ಆದರೆ ನಗರಸಭೆಯು ನೇರವಾಗಿ ಕೊಳವೆ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಅಭಾವ ಸೃಷ್ಟಿಸುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.
ನಗರಕ್ಕೆ ನೀರು ಪೂರೈಕೆ ಮಾಡುವ ರಾಂಪುರ ಕೆರೆಯ ಮೂಲಕ ಹಾಗೂ ಕೃಷ್ಣಾ ನದಿ ನೀರು ಪೂರೈಕೆಗೆ ಮುನ್ನ ನೀರು ಶುದ್ಧೀ ಕರಣ ಕಾರ್ಯ ಮಾಡುತ್ತಿಲ್ಲ. ನಗರದ ಜನತೆಗೆ ಬಹುತೇಕ ವರ್ಷಗಳಿಂದ ಶುದ್ಧೀಕರಿಸದೇ ನೀರೊದಗಿಸಲಾಗುತ್ತಿದೆ. ಶುದ್ಧೀಕರಣ ಘಟಕಗಳು ದುರಸ್ತಿಯಲ್ಲಿದ್ದರೂ  ನಗರಸಭೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಡಾ. ರಜಾಕ್ ಉಸ್ತಾದ್, ರಾಜಶೇಖರ್ ಸುಲ್ತಾನಪುರ, ತಾಯಣ್ಣ ಯರಗೇರಾ, ಎನ್. ಪದ್ಮವರ್ಧನ್ ವಕೀಲರು ಸೇರಿ ಅನೇಕರಿದ್ದರು.
ನಿರ್ಲಕ್ಷ್ಯ
ನೀರಿನ ಗುಣಮಟ್ಟ ಪರೀಕ್ಷೆಗೆ ನಗರಸಭೆಯಲ್ಲಿ ಪ್ರಯೋಗಾಲಯ ಮತ್ತು ತಜ್ಞರಿಲ್ಲ. ಇದು ನಗರಸಭೆಯ ಕಾರ್ಯವೈಖರಿಯಲ್ಲಿ ನಿರ್ಲಕ್ಷ್ಯವನ್ನು ಹೊರಹಾಕಿದೆ. ಕಾರಣ ಕೂಡಲೇ ನಗರದ ಜನತೆಗೆ ಸಮರ್ಪಕ ನೀರೊದಗಿಸಬೇಕು. ನೀರು ಪೂರೈಕೆ ಮುಖ್ಯ ಕೊಳವೆ ಮಾರ್ಗದಲ್ಲಿ ಸಂಪರ್ಕ ಪಡೆದಿರುವ ಎಲ್ಲ ನಳಗಳನ್ನು ಕೂಡಲೇ ಕಿತ್ತು ಹಾಕಬೇಕು. ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ದುರಸ್ತಿ ಅಗತ್ಯ
ಕೃಷ್ಣಾ ನದಿ ನೀರಿನ ಪೂರೈಕೆ ಮುಖ್ಯ ಮಾರ್ಗದಲ್ಲಿ ಕೈಗಾರಿಕೆಗಳಿಗೆ ನೀಡಿದ ಸಂಪರ್ಕ ಕೂಡಲೇ ಕಡಿತಗೊಳಿಸಬೇಕು. ನೀರು ಶುದ್ಧೀಕರಣ ಘಟಕಗಳನ್ನು ಕಾರ್ಯನಿರ್ವಹಣೆ ಮಾಡುವಂತೆ ದುರಸ್ತಿಗೊಳಿಸಬೇಕು.ಪ್ರತಿವರ್ಷ ನಗರಸಭೆಗೆ ಸರ್ಕಾರದಿಂದ ದೊರೆಯುವ ಕುಡಿಯುವ ನೀರಿನ ಅನುದಾನದ ವೆಚ್ಚ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವಂತೆ ಹೋರಾಟಗಾರರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement