ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅರಣ್ಯ ಜಮೀನು ಸಾಗುವಳಿ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

Vishwanath S
Updated On : 12 Jun 2014, 11:33 am

ಕ.ಪ್ರ. ವಾರ್ತೆ ,  ರಾಯಚೂರು ,  ಜೂ. 11
ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಭೂಮಿ ಮತ್ತು ಗೈರಾಣ ಭೂಮಿಯ ಸಮಸ್ಯೆ ಪರಿಹಾರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾ ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು,ತಾಲೂಕಿನ ಸಿದ್ರಾಂಪೂರು, ಬಿಜನಗೇರಾ, ಆಯಜಪೂರು, ಉಂಡ್ರಾಲದೊಡ್ಡಿ, ಬಾಪೂರು, ಬಾಪೂರು ತಂಡಾ, ಬಾಯಿದೊಡ್ಡಿ, ಸಿಂಗನೋಡಿ, ಮಂಡಲಗೇರಾ, ಅರಿಸಿಕೇರಾ, ಅರಿಸಕೇರಾ ತಂಡಾ, ಚಂದ್ರಬಂಡ, ಮಾಸದೊಡ್ಡಿ, ಜುಲಮಗೇರಾ, ಲಿಂಗನಖಾನದೊಡ್ಡಿ, ಜಂಬಲದಿನ್ನಿ, ಪುಚ್ಚಲದಿನ್ನಿ, ಮಿಡಗಲದಿನ್ನಿ ಸೇರಿ ವಿವಿಧೆಡೆ ಕೆಳ ವರ್ಗದವರು ಹಾಗೂ ಶೋಷಿತ ವರ್ಗದವರು ಕಳೆದ ಅನೇಕ ವರ್ಷಗಳಿಂದ ಅರಣ್ಯ ಜಮೀನನ್ನು ಹಾಗೂ ಗೈರಾಣ ಭೂಮಿಯನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಅವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಜಮೀನು ಹಂಚಿಕೆ: ಸುಮಾರು 80 ವರ್ಷಗಳಿಂದ ಬಡ ಕುಟುಂಬಗಳವರು ಅರಣ್ಯ ಜಮೀನು ಹಾಗೂ ಸರ್ಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಅದರಲ್ಲಿಯೇ ಬದುಕು ಕಂಡುಕೊಂಡಿದ್ದಾರೆ. ಇಂತಹ ಭೂಮಿಯನ್ನು ಸಾಗುವಳಿ ಮಾಡುತ್ತಿರುವವರಿಗೆ ಕೂಡಲೇ ಸರ್ಕಾರ ಜಮೀನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಸದ್ಯ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಕಳೆದ ಅನೇಕ ದಶಕಗಳಿಂದ ಕೃಷಿ ಕೈಗೊಳ್ಳುತ್ತಿರುವವರನ್ನು ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದೆ. ಅರಣ್ಯ ಭೂಮಿ ಸಾಗುವಳಿದಾರರ ವಿರುದ್ಧ  ಅರಣ್ಯ ಇಲಾಖೆಯವರು ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದು ಕೂಡಲೇ ಕೇಸು ದಾಖಲಿಸುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಹಾನಿ ಬೇಡ: ಈಗಲೇ ತಾಲೂಕಿನ ಅನೇಕ ಕಡೆ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡಿದವರ ವಿರುದ್ಧ ಕೇಸು ದಾಖಲಿಸಿದ್ದು ಕೂಡಲೇ ಅಂಥ ಕೇಸು ವಾಪಸು ಪಡೆಯಬೇಕು. ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿರುವ ಪ್ರದೇಶದಲ್ಲಿ ಬೆಳೆಗೆ ಹಾನಿಯಾಗುವಂತೆ ಹಾಗೂ ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ಭೂಮಿಯಲ್ಲಿ ತೆಗ್ಗು ತೆಗೆದು ಸಸಿ ನೆಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮನವಿ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರು 75 ವರ್ಷದಿಂದ ಸಾಗುವಳಿ ಮಾಡುತ್ತಿರುವ ಬಗ್ಗೆ ದಾಖಲಾತಿ ಒದಗಿಸಬೇಕೆಂಬ ಷರತ್ತು ತೀರಾ ಅವೈಜ್ಞಾನಿಕವಾಗಿದೆ. ಕೂಡಲೇ ಈ ಷರತ್ತನ್ನು ಹಿಂದಕ್ಕೆ ಪಡೆಯಬೇಕು ಎಂದು ಹೋರಾಟಗಾರರು ಮನವಿ ಮಾಡಿದರು.
ಸಂಘಟನೆಯ ಬೇಡಿಕೆಗಳನ್ನು ಪರಿಹರಿಸಲು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಮುಖಂಡರನ್ನೊಳಗೊಂಡ ಗ್ರಾಮ ಮತ್ತು ಗ್ರಾಪಂ ಮಟ್ಟದ ಸಮಿತಿಗಳನ್ನು ರಚಿಸಬೇಕು. ಅವುಗಳ ಮೂಲಕವೇ ಸಾಗುವಳಿದಾರರಿಂದ ಅರ್ಜಿ ಪಡೆದು ಹಕ್ಕುಪತ್ರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಮಲ್ಲಯ್ಯ ಜಾಲಹಳ್ಳಿ, ಕೆ.ಜಿ.ವೀರೇಶ್, ಎಚ್.ಪದ್ಮಾ, ಬಾಪೂರು ಸತ್ಯಪ್ಪ, ಬಸವರಾಜ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement