ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಹಿತಿಗಳಲ್ಲೂ ಆಂತರಿಕ ಸಂಘರ್ಷ

Vishwanath S
Updated On : 12 Jun 2014, 11:33 am

ರಾಯಚೂರು: ಪ್ರೊ. ಎಂ.ಎಂ. ಕಲ್ಬುರ್ಗಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ನಿಡುಮಾಮಿಡಿ ಮಹಾ ಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಾಹಿತಿಗಳ ನಡುವಿನ ಆಂತರಿಕ ಸಂಘರ್ಷ ಹಾಗೂ ರಾಜಕಾರಣದ ಸಾಕ್ಷಿಯಂತಿದೆ. ಇವರಿಬ್ಬರೂ ಧಾರ್ಮಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡಲು ಅರ್ಹರಲ್ಲ ಎಂದು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೊ. ಎಂ.ಎಂ. ಕಲ್ಬುರ್ಗಿ ಅವರು ಯು.ಆರ್. ಅನಂತಮೂರ್ತಿ ಅವರ ಪುಸ್ತಕದಲ್ಲಿ ದಾಖಲಿಸಿರುವ ಹಿಂದೂ ದೇವರ ವಿಗ್ರಹಗಳ ಮೇಲೆ ಮೂತ್ರ ವಿಸರ್ಜಿಸಿದರೆ ಏನೂ ಆಗುವುದಿಲ್ಲ ಎಂಬ ಹೇಳಿಕೆ ಅನಗತ್ಯ ಗೊಂದಲ ಎಬ್ಬಿಸಿದೆ. ಈ ಪ್ರಕರಣ ವೈಭವೀಕರಣಕ್ಕೆ ಅರ್ಹವಾದುದಲ್ಲ ಎಂದು ಹೇಳಿದರು. ಪ್ರೊ. ಕಲ್ಬುರ್ಗಿ ಅವರು ಈ ಹಿಂದೆಯೂ ಅನಂತಮೂರ್ತಿ ಅವರಿಗೆ ಪ್ರಶಸ್ತಿ ನೀಡಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ್ದರು. ಈಗಲೂ ಅವರು ಅದನ್ನೇ ಮಾಡಿದ್ದಾರೆ. ಮೂಢನಂಬಿಕೆಗೆ ಸಂಬಂಧಿಸಿದ ವೇದಿಕೆಯಲ್ಲಿ ಇಂತಹ ವಿಚಾರ ಪ್ರಸ್ತಾಪಿಸುವ ಅಗತ್ಯತೆಯಿರಲಿಲ್ಲ ಎಂದು ಕಿವಿಮಾತು ಹೇಳಿದರು.
ಸಣ್ಣ-ಪುಟ್ಟ ವಿಚಾರಗಳಿಗೆ ಪ್ರತಿಭಟನೆ: ಕೇವಲ ರಾಜಕೀಯ ನಾಯಕರಲ್ಲಷ್ಟೇ ಅಲ್ಲ ಸಾಹಿತಿಗಳು, ಬುದ್ಧಿಜೀವಿಗಳಲ್ಲೂ ಆಂತರಿಕ ಸಂಘರ್ಷ ಎಂಬುದಿದೆ ಎಂಬುದನ್ನು ಈ ಪ್ರಕರಣ ಹೊರಹಾಕಿದೆ. ಸಾಕಷ್ಟು ವೈಮನಸ್ಸು, ದ್ವೇಷ ಅಸೂಯೆಗಳಿರುವುದು ಇದರಿಂದ ಬಯಲಾಗಿದೆ. ವಾಸ್ತವದಲ್ಲಿ ಈ ಪ್ರಕರಣವು ಪ್ರತಿಭಟನೆಗಳಿಗೂ ಅರ್ಹವಾದುದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಹೋರಾಟಕ್ಕಿಳಿಯುವ ಮನೋಭಾವ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿಂದೊಮ್ಮೆ ಶೈವರು ವೈಷ್ಣವರ ವಿಗ್ರಹಗಳ ಮೇಲೆ ಹಾಗೂ ವೈಷ್ಣವರು ಶೈವರ ದೇವರ ವಿಗ್ರಹಗಳ ಮೇಲೆ ಅಪಮಾನ ಮಾಡುವ ಉದ್ದೇಶದಿಂದಲೇ ಮೂತ್ರಿಸುತ್ತಿದ್ದದ್ದು ಗ್ರಂಥಗಳಲ್ಲಿ ದಾಖಲಿದೆ. ಅಂತಹ ಘಟನೆಗಳು ದಕ್ಷಿಣ ಭಾರತದಲ್ಲಿಯೇ ಆಗ ನಡೆದಿದ್ದವು ಎಂದಿದೆ. ಆಗ ಅದು ಜಾತಿ ವೈಷಮ್ಯ ಮಾತ್ರ ಆಗಿತ್ತು. ಆದರೆ ಈಗ ಮಾನವನ ವಿಕಾಸವಾಗಿದ್ದು, ಇದೇ ಕಾರಣಕ್ಕೆ ಸದ್ಯ ಇಂತಹ ಯಾವುದೇ ಕೃತ್ಯ, ಹೇಳಿಕೆ ವಿವಾದಕ್ಕೆ ದಾರಿ ಮಾಡುತ್ತಿದೆ. ಪ್ರತಿರೋಧವೂ ವ್ಯಕ್ತವಾಗುತ್ತಿದೆ ಎಂದರು.
ಅಗೌರವ ತೋರಿದಂತೆ: ಸಮಾಜದಲ್ಲಿ ಯಾರೂ ಕೂಡಾ ದೇವರು ಮತ್ತು ದೇವರಿಗೆ ಸಂಬಂಧಿಸಿದ ವಿಗ್ರಹಗಳಿಗೆ ಸಂಬಂಧಿಸಿದ ನಂಬಿಕೆಯನ್ನು ಲಘುವಾಗಿ ಪರಿಗಣಿಸಬಾರದು. ದೇಶದಲ್ಲಿ ಚಾರಿತ್ರಿಕ, ಸಾಂಸ್ಕೃತಿಕ ರಾಯಭಾರಿಗಳ ವಿಗ್ರಹಗಳಿವೆ. ಬಸವಣ್ಣ, ಅಂಬೇಡ್ಕರ್, ವಿವೇಕಾ ನಂದರಂಥ ಮಹಾನ್ ದಾರ್ಶನಿಕರ ಮೂರ್ತಿಗಳಿವೆ. ದೇವರೆಂದು ನಾವು ಅವರನ್ನೂ ನಂಬಿದ್ದೇವೆ. ಹೀಗಾಗಿ ದೇವರ ವಿಗ್ರಹಗಳನ್ನು ಅಪಮಾನಿಸಿದರೆ ಏನೂ ಆಗದು ಎಂಬರ್ಥದ ಹೇಳಿಕೆ ನೀಡಿದರೆ ಅದು ಎಲ್ಲರಿಗೂ ಅಗೌರವ ತೋರಿದಂತಾಗುತ್ತದೆ ಎಂಬ ಅರಿವು ಅವಶ್ಯಕ ಎಂದು ಹೇಳಿದರು.
ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಭಾವನಾತ್ಮಕವಾಗಿ ನೋಡದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಗಣಿಸುವುದು ಹೆಚ್ಚು ಅಗತ್ಯ. ದೌರ್ಜನ್ಯ ತಡೆಗೆ ಎಲ್ಲರೂ ಒಗ್ಗೂಡಿ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement