ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಂಬಾಕು ದುಷ್ಪರಿಣಾಮ ಜಾಗೃತಿ ಅಗತ್ಯ: ರಗಟೆ

Vishwanath S
Updated On : 14 Jun 2014, 11:57 am

ಕ.ಪ್ರ. ವಾರ್ತೆ ,  ಬೀದರ್ ,  ಜೂ.13
ಯುವ ಜನಾಂಗ ತಂಬಾಕು ಸೇವನೆಯ ದುಷ್ಟರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರೆ, ತಂಬಾಕು ಸೇವನೆಯಿಂದ ಹರಡುವ ಮಾರಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸಿದಂತಾಗುತ್ತದೆ ಎಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಸಿ.ಎಸ್. ರಗಟೆ ಕರೆ ನೀಡಿದರು.
ಇತ್ತೀಚೆಗೆ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ, ಧೂಮಪಾನ ಹಾಗೂ ತಂಬಾಕು ಸೇವನೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದ ಹಿತದೃಷ್ಟಿಯಿಂದ ತಂಬಾಕು ಸೇವನೆ ತ್ಯಜಿಸಬೇಕು. ಪ್ರಸಕ್ತ ಸಾಲಿನಲ್ಲಿ ತಂಬಾಕು ತೆರಿಗೆಯನ್ನು ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದಿಂದಲಾದರೂ ತಂಬಾಕು ಸೇವನೆಯಲ್ಲಿ ಇಳಿಮುಖ ಕಂಡು ಬರುವ ಆಶಯ ವ್ಯಕ್ತಪಡಿಸಿದರು.
ವರ್ಜಿಸಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮದನಾ ವೈಜಿನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಧೂಮಪಾನ, ತಂಬಾಕು, ಗುಟ್ಕಾ ಪದಾರ್ಥಗಳನ್ನು ಮೊದಲು ನಾವು ವರ್ಜಿಸಬೇಕು ಎಂದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ ಮಾತನಾಡಿ, ಆಹಾರ ರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಆರೋಗ್ಯಕ್ಕೆ ಹಾನಿಕರವಾಗುವ ಯಾವುದೇ ಅಂಶಗಳನ್ನು ಆಹಾರ ಉತ್ಪನ್ನ ಹೊಂದಿರಬಾರದು. ಅದೇ ರೀತಿ ತಂಬಾಕು, ನಿಕೋಟಿನ್ ಪದಾರ್ಥಗಳನ್ನು ಯಾವುದೇ ಆಹಾರ ಪದಾರ್ಥಗಳಲ್ಲಿ ಮಿಶ್ರಣ ಮಾಡಬಾರದು. ಇದನ್ನು ದೇಶದ 24 ರಾಜ್ಯಗಳು ಹಾಗೂ 3ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಷೇಧಿಸಲಾಗಿದೆ ಎಂದರು.
10 ಲಕ್ಷ ಜನರ ಸಾವು: ತಂಬಾಕು ಉತ್ಪನ್ನಗಳನ್ನು ಜಗಿಯುವದರಿಂದ ಹಾಗೂ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಜನ ಸಾವನಪ್ಪುತ್ತಾರೆ. ಅಲ್ಲದೆ ಇದರಿಂದ ಉಂಟಾಗುವ ರೋಗಗಳ ಚಿಕಿತ್ಸೆಗಾಗಿ ಪ್ರತಿ ವರ್ಷ ರು. 2135 ಕೋಟಿ ವೆಚ್ಚವಾಗಲಿದೆ. ಇದು ತಂಬಾಕು ನಿಯಂತ್ರಣಕ್ಕೆ ವ್ಯಯವಾಗುವ ಆಯವ್ಯಯಕ್ಕಿಂತ ಹೆಚ್ಚಾಗಿದೆ ಎಂದರು.
ಕರ್ನಾಟಕದಲ್ಲಿ 2.16 ಕೋಟಿ ಯುವ ಜನಾಂಗ ತಂಬಾಕು ಸೇವನೆಯಲ್ಲಿ ತೊಡಗಿದ್ದು, ಈ ಪೈಕಿ ಶೇ. 19ರಷ್ಟು ಪುರುಷರು ಹಾಗೂ ಶೇ. 16ರಷ್ಟು ಮಹಿಳೆಯರಿದ್ದಾರೆ. ಶೇ.8.2ರಷ್ಟು ಅರೇ ನಗರ, ಶೇ. 6.2ರಷ್ಟು ನಗರ ಹಾಗೂ ಶೇ. 3.4ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳು ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ. ಇದು ಯುವ ಜನಾಂಗದ ಮೇಲೆ ಗಂಭೀರವಾದ ಪರಿಣಾಮ ಬಿರುತ್ತದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಸಿದ್ದಲಿಂಗಪ್ಪ ಮಾತನಾಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ದಣಿವನ್ನು ನಿವಾರಿಸಿಕೊಳ್ಳಲು ವಿಶ್ರಾಂತಿ ಪಡೆಯುವ ಸಮಯದಲ್ಲಿ ಬೀಡಿ, ಸಿಗರೇಟು, ತಂಬಾಕು ಅಥವಾ ಗುಟ್ಕಾದಂತಹ ಚಟಕ್ಕೆ ಬಲಿಯಾಗಿ ಹೃದಯ ಕಾಯಿಲೆ, ಕ್ಯಾನ್ಸರ್‌ಗಳಂತಹ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು ವಿಶೇಷವಾಗಿ ಹದಿಹರೆಯದ ಯುವಕರು ಇಂತಹ ಚಟಗಳಿಗೆ ಬಲಿಯಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ನೋಡಲ್ ಅಧಿಕಾರಿ ಡಾ. ಹರ್ಷವರ್ಧನ್ ಮಾತನಾಡಿದರು. ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಶಿವಶಂಕರ ಬಿ. ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಾಮನರಾವ ವಾಘಮಾರೆ ವಂದಿಸಿದರು. ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲೆಯ ಎಲ್ಲಾ ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು, ಸ್ಥಳಿಯ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement