ಪಕ್ಷ ಸಂಘಟನೆಗೆ ಒತ್ತು: ಖೂಬಾ
ಬೀದರ್: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಸಂಸದ ಭಗವಂತ ಖೂಬಾ ನುಡಿದರು.
ಪಕ್ಷದ ಕಚೇರಿಯಲ್ಲಿ ಬೀದರ್ ವಿಧಾನಸಭಾ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿ, ಎಲ್ಲ ಕಾರ್ಯಕರ್ತರು ಹಗಲು-ರಾತ್ರಿ ದುಡಿದು ಗೆಲ್ಲಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಯವರಿಗೆ ತಲುಪಿಸುವಲ್ಲಿ ಹಗಲಿರುಳು ದುಡಿಯುತ್ತೇನೆಂದರು. ಮುಂಬರುವ ತಾಪಂ ಹಾಗೂ ಜಿಪಂ ಮತ್ತು ಗ್ರಾಪಂ ಚುನಾವಣೆಗಾಗಿ ಕಾರ್ಯಕರ್ತರು ಸಿದ್ಧರಾಗಿರಬೇಕೆಂದರು.
ಸಭೆಯನ್ನು ಉದ್ಘಾಟಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ ಮಾತನಾಡಿದರು. ಮಂಡಲ ಅಧ್ಯಕ್ಷ ಮಹೇಶ ಪಾಲಂ ಪ್ರಾಸ್ತಾವಿಕ ಮಾತನಾಡಿ, ಮಂಡಲದ ಚಟುವಟಿಕೆಗಳು ಕುರಿತು ಸಭೆಯಲ್ಲಿ ವರದಿ ನೀಡಿದರು.
ಶಿಕ್ಷಕರ ಮತ ಕ್ಷೇತ್ರದ ಮಂಡಲ ಉಸ್ತುವಾರಿಗಳು: ಇದೇ ತಿಂಗಳ 20ರಂದು ನಡೆಯಲಿರುವ ಈಶಾನ್ಯ ಕರ್ನಾಟಕ ಶಿಕ್ಷಕರ ಮತ ಕ್ಷೇತ್ರದ ಮಂಡಲ ಉಸ್ತುವಾರಿಗಳನ್ನಾಗಿ ಬಿಜೆಪಿ ನೇಮಿಸಿದೆ.
ಔರಾದ್ ಮಂಡಲಕ್ಕೆ ಪ್ರಕಾಶ ಟೊಣ್ಣೆ, ಸುಚಿತ್ರಾ ಹಂಗರಗೆ ಹಾಗೂ ಸತೀಶ್ ಪಾಟೀಲ್, ಬೀದರ್ ಮಂಡಲಕ್ಕೆ ಉಪೇಂದ್ರ ದೇಶಪಾಂಡೆ, ಈಶ್ವರಸಿಂಗ್ ಠಾಕೂರ ಹಾಗೂ ರಾಜಶೇಖರ ನಾಗಮೂರ್ತಿ, ಬೀದರ್(ದಕ್ಷಿಣ) ಮಂಡಲಕ್ಕೆ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಶಾಂತಪ್ಪ ಜಿ. ಪಾಟೀಲ್, ಭಾಲ್ಕಿ ಮಂಡಲಕ್ಕೆ ಪ್ರಕಾಶ ಮಾಶೆಟ್ಟಿ ಹಾಗೂ ರಾವಸಾಬ ಬಿರಾದಾರ, ಬಸವಕಲ್ಯಾಣ ಮಂಡಲಕ್ಕಾಗಿ ವಿಜಯಲಕ್ಷ್ಮೀ ಹೂಗಾರ ಹಾಗೂ ಸುಧೀರ ಕಾಡಾದಿ, ಹುಮನಾಬಾದ್ ಮಂಡಲಕ್ಕಾಗಿ ಶಿವಾನಂದ ಮಂಠಾಳಕರ ಹಾಗೂ ಸೋಮನಾಥ ಪಾಟೀಲ್ ಅವರನ್ನು ನೇಮಿಸಲಾಗಿದೆ.