ಶಿಕ್ಷಣದಿಂದ ಉದ್ಯೋಗ ಜೀವನ ಸಾರ್ಥಕ
ಲಿಂಗಸ್ಗೂರು: 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಕೆಲಸದಲ್ಲಿ ದುಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬದುಕು ರೂಪಿಸಿಕೊಳ್ಳಲು ಅಗತ್ಯ ಶಿಕ್ಷಣ ಪಡೆದ ಬಳಿಕ ಉದ್ಯೋಗದಲ್ಲಿ ನಿರತರಾಗುವುದು ಸಾರ್ಥಕ ಜೀವನ ಸಾಗಿಸಲು ಸಾಧ್ಯ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಎಸ್.ಬಿ. ದ್ಯಾವಪ್ಪ ಹೇಳಿದರು.
ಪಟ್ಟಣದ ಶಾದಿಮಹಲ್‌ನಲ್ಲಿ ಗುರುವಾರ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, 14 ವರ್ಷದೊಳಗಿನ ಮಕ್ಕಳನ್ನು ಕೂಲಿ, ಜೀತ, ಕೃಷಿ, ಹೋಟೆಲ್, ಗ್ಯಾರೇಜ್, ಅಂಗಡಿ, ಇಟ್ಟಂಗಿ ಭಟ್ಟಿ ಸೇರಿದಂತೆ ಇತರೆ ಯಾವುದೇ ಉದ್ಯೋಗ, ಕೆಲಸಕ್ಕೆ ದುಡಿಯಲು ಕಳುಹಿಸುವುದು ಅಥವಾ ದುಡಿಯಲು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.
ಬಡತನ ಅಡ್ಡಿಯಲ್ಲ: ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವುದು ಪಾಲಕರ ಮತ್ತು ಶಿಕ್ಷಕರ ಜವಾಬ್ದಾರಿ. ವಿದ್ಯಾಭ್ಯಾಸದಿಂದ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡಿದರೆ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದರು.
ಅಪರಾಧ: ಸಹಾಯಕ ಆಯುಕ್ತ ಟಿ. ಯೋಗೇಶ್ ಮಾತನಾಡಿ, ಸಮಾಜದ ಒಳಿತಿಗಾಗಿ ಬದಕು ಸಾಗಿಸಲು ಶಿಕ್ಷಣ ಅವಶ್ಯವಾಗಿದ್ದು, ಹಸಿವು ನೀಗಿಸಲು ದುಡಿಯುವುದು ಅನಿವಾರ್ಯ. ಆದರೆ 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಕಳುಹಿಸದೆ ಶಿಕ್ಷಣವಂತರನ್ನಾಗಿಸಬೇಕು. ಪಾಲಕರು ಇದನ್ನು ಪಾಲನೆ ಮಾಡಿದರೆ ಎಲ್ಲರೂ ಶಿಕ್ಷಣವಂತರಾಗಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾಧೇಶ್ಯಾಮ್, ಸಿಪಿಐ ಎಂ. ವರದರಾಜು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್. ಮುದುಕಪ್ಪ, ಸಹಾಯಕ ಸರಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್ ಇದ್ದರು. ಪ್ರಹ್ಲಾದ್ ಆಚಾರಿ ವಿಶೇಷ ಉಪನ್ಯಾಸ ನೀಡಿದರು.