ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಕ್ರಮಕ್ಕೆ ದಸಂಸ ಆಗ್ರಹ
ರಾಯಚೂರು: ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಕುರಿತು ಮಾನವಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿರುವ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ ಕುರ್ಡಿ ಮತ್ತಿತರರು, ರಾಷ್ಟ್ರ ಕಂಡ ಮಹಾನ್ ನಾಯಕ ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಮದಲ್ಲಿ ದುಷ್ಕರ್ಮಿಗಳು ಅಪಮಾನ ಮಾಡಿದ್ದಾರೆ. ಆ ಮೂಲಕ ಗ್ರಾಮದಲ್ಲಿ ಗೊಂದಲ ಸೃಷ್ಟಿಸಿದ್ದಾರೆಂದು ಆರೋಪಿಸಿದರು. ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಸಂಘದ ಚನ್ನಬಸವ ಮಾಡಗಿರಿ, ಹನುಮಂತ ಅರೋಲಿ, ಚಿದಾನಂದ ಅರೋಲಿ, ಚನ್ನಬಸವ ಯಕ್ಲಾಸಪುರ ಸೇರಿದಂತೆ ಅನೇಕರಿದ್ದರು.
ಬೇಸಿಗೆ ಕ್ರಿಕೆಟ್ ತರಬೇತಿ ಸಮಾರೋಪ
ರಾಯಚೂರು: ನಗರದ ಕೃಷಿ ವಿವಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಬಿ.ಆರ್.ಬಿ. ಕಾಲೇಜಿನ ಪ್ರೊ. ಸುದರ್ಶನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ಗುರಿ ಮುಟ್ಟಲು ಪ್ರಯತ್ನಿಸಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಾಣಿಜ್ಯೋದ್ಯಮಿ ಕುಂಟ್ನಾಳ್ ಸಣ್ಣ ಹನುಮಂತಯ್ಯ, ಸಿಟಿ ಇಲೆವೆನ್ ಕ್ಲಬ್ನ ಅಧ್ಯಕ್ಷ ಶರಣರೆಡ್ಡಿ, ಕೆಎಸ್ಸಿಎ ನಿರ್ಣಾಯಕ ಭೀಮಾಚಾರ್ಯ, ಕಾಫಿಡೇ ಮಾಲೀಕ ಎಂ. ವಿಜಯಕುಮಾರ್, ದೈಹಿಕ ಶಿಕ್ಷಣ ಅಧಿಕಾರಿ ರಾಜಣ್ಣ ಸೇರಿದಂತೆ ಅನೇಕರಿದ್ದರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಕ್ರೀಡಾಳುಗಳು ಇದ್ದರು.
ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ರಿಗೆ ಸನ್ಮಾನ
ರಾಯಚೂರು: ನಗರಕ್ಕೆ ಇತ್ತೀಚೆಗೆ ಆಗಮಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ದಲಿತ ಮುಖಂಡರು ಸನ್ಮಾನಿಸಿದರು. ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ನಂತರದಲ್ಲಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಮುಖಂಡರಾದ ವೈ. ನರಸಪ್ಪ, ಶರಣಪ್ಪ ದಿನ್ನಿ, ಹನುಮಂತಪ್ಪ , ಗಂಗಾವತಿ ಕಾಲೇಜು ಅಧ್ಯಾಪಕ ಕರಿಗೂಳಿ ಸುಂಕೇಶ್ವರ, ಒಡೆಯರಾಜ್ ಚಂದ್ರಶೇಖರ್ ಅರೋಲಿ ಸೇರಿ ಅನೇಕರು ಶಾಲು ಹೊದಿಸಿ ಸನ್ಮಾನಿಸಿದರು.
ತಂಪು ತಂದ ಮುಂಗಾರು ಮಳೆ: ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಮುಂಗಾರು ಹಂಗಾಮಿನ ಮೊದಲ ಮಳೆ ಸುರಿದು ಕಳೆದ ಕೆಲ ದಿನಗಳಿಂದ ಬೇಸಿಗೆಯ ಬಿರುಬಿಸಿಲಿಗೆ ತತ್ತರಿಸಿದ್ದ ಜನತೆಗೆ ತಂಪು ತಂದಿತು. ಮಳೆಯಿಂದಾಗಿ ರಸ್ತೆಗೆ ಚರಂಡಿ ನೀರು ನುಗ್ಗಿತು. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿಯೇ ಕಾಲ ಕಳೆಯುವಂತಾಯಿತು. ವಿವಿಧೆಡೆ ವಿದ್ಯುತ್ ಕೈಕೊಟ್ಟು ತೊಂದರೆ ಅನುಭವಿಸಿದರು. ಮಾನವಿ, ಸಿಂಧನೂರು ತಾಲೂಕಿನಲ್ಲಿ ತುಂತುರು ಮಳೆಯಾಗಿದೆ. ಗ್ರಾಮೀಣ ಪ್ರದೇಶದ ವಿವಿಧೆಡೆಯೂ ಮಳೆಯಾದ ಬಗ್ಗೆ ವರದಿಯಾಗಿದೆ.
ಉಡುಮಗಲ್ ಖಾನಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಯಚೂರು: ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಶಾಲೆಯ ಮುಖ್ಯಗುರು ಬಂದೋಲಿ, ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ನಾವೆಲ್ಲರೂ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ. ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಕೊಡುಗೆ ಇದೇ ಆಗಿದೆ ಎಂದರು. ಶಿಕ್ಷಕರಾದ ಭಾಗ್ಯಲಕ್ಷ್ಮಿ, ಆರ್.ಪಿ. ಕುಲಕರ್ಣಿ, ಖಾಜಾ ಹುಸೇನ್, ಎ.ವಿ. ಕುಲಕರ್ಣಿ, ಪರಶುರಾಮ್ ಸೇರಿ ಅನೇಕರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿ
ಸಿಂಧನೂರು: ತಾಲೂಕಿನ ಬ್ರಾಹ್ಮಣ ಸಮಾಜದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವಂತೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ಕುಲಕರ್ಣಿ ನೇತತ್ವದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡೂರಾವ್ ಅವರಿಗೆ ಶುಕ್ರವಾರ ರಾಯಚೂರಿನಲ್ಲಿ ಮನವಿ ಸಲ್ಲಿಸಲಾಯಿತು. ಸ್ಮಶಾನದ ಅಗತ್ಯ ಸೌಲಭ್ಯಗಳಿಗಾಗಿ ಹಣಕಾಸಿನ ತೊಂದರೆ ಇದ್ದು, ಮಾಜಿ ಸಂಸದ ಫಕೀರಪ್ಪ ಅವರು ಈಗಾಗಲೇ ಎರಡು ಲಕ್ಷ ರು. ಹಣ ಬಿಡುಗಡೆ ಮಾಡಿದ್ದು, ಅದಿನ್ನೂ ತಮ್ಮ ಕೈ ಸೇರಿಲ್ಲ. ಕನಿಷ್ಟ ಐದು ಲಕ್ಷ ರು. ಅವಶ್ಯಕತೆ ಇದ್ದು, ಹಣವನ್ನು ಮಂಜೂರು ಮಾಡಬೇಕು ಎಂಬ ಮನವಿ ಪತ್ರವನ್ನು ಸಚಿವರಿಗೆ ಅರ್ಪಿಸಲಾಯಿತು. ಸಮಾಜದ ಉಪಾಧ್ಯಕ್ಷ ನರಸಿಂಗರಾವ್ ಚನ್ನಳ್ಳಿ, ಖಜಾಂಚಿ ಮನೋಹರರಾವ್ ಕುಲಕರ್ಣಿ, ನಗರಸಭೆ ಸದಸ್ಯ ವೆಂಕಟರಾವ್ ಬಂಡಿ ವಕೀಲ, ಮಾಜಿ ಸದಸ್ಯ ಕೆ. ಗೋವಿಂದರಾವ್, ಮುಖಂಡರಾದ ರೌಡಕುಂದಿ ರಾಘವೇಂದ್ರರಾವ್, ಗೋಪಾಲರಾವ್ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ, ಅನಂತಾಚಾರ್ಯ ಸಾಲಗುಂದಾ, ನಾಗೇಂದ್ರ ಕುಮಾರ ಸಾಹುಕಾರ, ಆನಂದ ಗೌರಕರ ಮತ್ತಿತರರು ಪಾಲ್ಗೊಂಡಿದ್ದರು.
ಜಿಪಂ ಅಧಿಕಾರಿಗಳ ವರ್ಗಾವಣೆಗೆ ದಸಂಸ ಆಗ್ರಹ
ರಾಯಚೂರು: ಕಳೆದ ಅನೇಕ ವರ್ಷಗಳಿಂದ ಇಲ್ಲಿನ ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಕುರಿತು ಜಿಪಂ ಸಿಇಒಗೆ ಮನವಿ ಸಲ್ಲಿಸಿರುವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಯರಾಜ್, ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಕಳೆದ 19 ವರ್ಷಗಳಿಗೂ ಅಧಿಕ ಕಾಲದಿಂದ ಸಿಬ್ಬಂದಿ ವರ್ಗಾವಣೆಗೊಂಡಿಲ್ಲ. ಅದರಿಂದಾಗಿ ಅಕ್ರಮಕ್ಕೆ ದಾರಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಒಂದೇ ಸ್ಥಳದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸದಂತೆ ಸರ್ಕಾರ ಕಾನೂನು ರೂಪಿಸಿದೆ. ಆದರೆ ಕಾನೂನಿನ ಪಾಲನೆಯಾಗುತ್ತಿಲ್ಲ. ರಾಜಕೀಯ ಪ್ರಭಾವ ಬಳಸುವ ಸಿಬ್ಬಂದಿ ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿಯೇ ವರ್ಷಗಟ್ಟಲೇ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಅಂಥವರನ್ನು ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದು, ತಪ್ಪಿದಲ್ಲಿ ಲೋಕಾಯುಕ್ತರಿಗೆ ಈ ಬಗ್ಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
ವೈ. ಮಲ್ಲಾಪುರದಲ್ಲಿ ವಿಶ್ವ ಬಾಲಕಾರ್ಮಿಕ ದಿನಾಚರಣೆ
ರಾಯಚೂರು: ತಾಲೂಕಿನ ವೈ. ಮಲ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್, ಗ್ರಾಪಂ ಜಂಬಲದಿನ್ನಿ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಚರಣೆ ಅಂಗವಾಗಿ ಗ್ರಾಮದಲ್ಲಿ ಶಾಲಾ ಮಕ್ಕಳು ಜಾಗೃತಿ ಜಾಥಾ ನಡೆಸಿದರು. ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ವಹಿಸಿದ್ದರು. ಅತಿಥಿಗಳಾಗಿ ತಾಯಣ್ಣ ದಳಪತಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದಂತೆ ಸಲಹೆ ನೀಡಿದರು. ಜಂಬಲದಿನ್ನಿ ಗ್ರಾಪಂ ಪಿಡಿಒ ಮಧ್ವರಾಜ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಸರ್ಕಾರ ಹತ್ತಾರು ಕಾರ್ಯಕ್ರಮ ಜಾರಿಗೆ ತಂದಿದೆ. ಅದರಲ್ಲೂ ಮಕ್ಕಳನ್ನು ಕೂಲಿ ಕೆಲಸದ ಬದಲಿಗೆ ಶಾಲೆಗೆ ಕಳಿಸಲು ಪೂರಕವಾಗಿ ಬಿಸಿಯೂಟ ವಿತರಣೆ, ಸಮವಸ್ತ್ರ, ಪಠ್ಯಪುಸ್ತಕ ನೀಡಲಾಗುತ್ತಿದೆ ಎಂದರು. ಮುಖ್ಯಗುರು ಮೂರ್ತಿ ಗೋನ್ವಾರ್, ಶಿಕ್ಷಕರಾದ ನಾಗರಾಜು, ವೀರೇಶ್, ಕುಸುಮಾ ಸೇರಿದಂತೆ ಅನೇಕರಿದ್ದರು. ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕುಡುಕ ಪೋಸ್ಟ್ಮನ್ ರಾದ್ಧಾಂತ: ಅಂಚೆ ಕಚೇರಿಗೆ ಮುತ್ತಿಗೆ
ಮುದಗಲ್: ಕಚೇರಿ ವೇಳೆಯಲ್ಲಿಯೇ ಮದ್ಯದ ಅಮಲಿನಲ್ಲಿ ಬರುವ ಪೋಸ್ಟ್ಮನ್ನಿಂದ ನಿಗದಿತ ಸಮಯದಲ್ಲಿ ಮಾಸಾಶನ ವಿತರಣೆಯಾಗದೇ ಇರುವುದರಿಂದ ಬೇಸತ್ತ ವಿಧವೆಯರು, ಸಂಧ್ಯಾ ಸುರಕ್ಷಾ ಮಾಸಾಶನದ, ಹಿರಿಯ ನಾಗರಿಕರು, ಅಂಗವಿಕಲರು ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪೋಸ್ಟ್ಮನ್ ಅಮರೇಶ ಮೇಲೆ ಕ್ರಮಕ್ಕೆ ಒತ್ತಾಯಿಸಿದರು. ಪಟ್ಟಣ ಅಂಚೆ ಕಚೇರಿಗೆ ಆಗಮಿಸಿದ ಫಲಾನುಭವಿಗಳೊಂದಿಗೆ ರಾದ್ಧಾಂತ ಮಾಡಿಕೊಂಡು ಇಲಾಖೆ ವಿಚಾರಣೆಗೆಂದು ಹೋಗಿ ಗುರುವಾರ ಮಧ್ಯಾಹ್ನ ಸೇವೆಗೆ ಹಾಜರಾಗಿದ್ದರೂ ಮತ್ತೆ ರಜೆ ಪಡೆದಿರುವುದಾಗಿ ಅಧಿಕಾರಿಗಳಿಗೆ ಪತ್ರ ನೀಡಿ ಪಾರಾಗಲು ಪ್ರಯತ್ನಿಸಿದರು. ಆದರೆ ಸಮಸ್ಯೆ ಬಗೆಹರಿಸಬೇಕು, ಸಮಯಕ್ಕೆ ಸರಿಯಾಗಿ ಮಾಸಾಶನ ನೀಡುವುದಿಲ್ಲ, ಯಾವಾಗಲೂ ಕುಡಿದು ಬರುತ್ತಾನೆ. ಹಣವನ್ನು ಕಚೇರಿಯಲ್ಲಿ ವಿತರಿಸದೇ ಖಾಸಗಿ ಸ್ಥಳದಲ್ಲಿ ವಿತರಿಸುತ್ತಿದ್ದು, ಕ್ರಮ ಜರುಗಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಅಧಿಕಾರಿ ಮೂರ್ತಿಯವರು ಪೊಲೀಸ್ ಠಾಣೆಗೆ ಮೌಖಿಕ ವರದಿ ಮಾಡಿ ವೈದ್ಯಕೀಯ ಪರೀಕ್ಷೆ ಮಾಡಿಸಲು ಮುಂದಾದರು. ಆದರೆ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಹಣ ವಿತರಣೆ ಮಾಡಿದರು.
ಶಿಕ್ಷಕರ ಸಮಸ್ಯೆ ನಿವಾರಣೆಗೆ ಪೂರಕ ಕಾರ್ಯ: ಡಾ. ರಂಗನಾಥ
ರಾಯಚೂರು: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ವೇತನ ಬಡ್ತಿ ಸೇರಿದಂತೆ ಶಿಕ್ಷಕರನ್ನು ಸರ್ಕಾರ ನಾನಾ ರೀತಿಯಿಂದ ಶೋಷಿಸುತ್ತಿದ್ದು, ಈಶಾನ್ಯ ಮತ ಕ್ಷೇತ್ರದ ಚುನಾವಣೆಯಲ್ಲಿ ತಾವು ಆಯ್ಕೆಯಾದಲ್ಲಿ ಶಿಕ್ಷಕರು ಎದುರಿಸುತ್ತಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಈಶಾನ್ಯ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಎಂ.ಆರ್. ರಂಗನಾಥ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಶಿಕ್ಷಕರಿಗೆ ವೇತನ, ಬಡ್ತಿ ಸೇರಿ ವಿವಿಧ ರೀತಿಯಲ್ಲಿ ಸೌಲತ್ತು ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಮುಖ್ಯ ಗುರುಗಳು, ಸಹ ಶಿಕ್ಷಕರು ಸೇರಿ ಎಲ್ಲ ಹಂತದ ಸಿಬ್ಬಂದಿಗೆ ಸೌಲಭ್ಯ ದೊರಕಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ಪ್ರೌಢಶಾಲಾ ಶಿಕ್ಷಕರು ಮುಖ್ಯ ಗುರುಗಳು, ಪ್ರಾಧ್ಯಾಪಕರೂ ಅನ್ಯಾಯಕ್ಕೆ ಒಳಗಾಗಿದ್ದಾರೆಂದು ಟೀಕಿಸಿದರು. ತಾವು ಕಳೆದ ಅನೇಕ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದು, ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಮತಕ್ಷೇತ್ರದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಾಟಿ ಔಷಧ ಸೇವನೆಯಿಂದ ಅಡ್ಡಪರಿಣಾಮ ಇಲ್ಲ
ಮುದಗಲ್: ನಾಟಿ ಔಷದಿ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬಿರುವುದಿಲ್ಲ ಎಂದು ಇಲಕಲ್ನ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಂಶುಪಾಲ ಬಸವರಾಜ ಗವಿಮಠ ಹೇಳಿದರು. ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ ಹೂ ಅಲ್ ಶಫಹವನೌಷಧಿಕ ಆಯುರ್ವೇದ ವೈದ್ಯಷತ್, ಜನಕಲ್ಯಾಣ ಟ್ರಸ್ಟ್ ಹಾಗೂ ವೈದ್ಯಕಿರಣ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 25ನೇ ಮೃಗಶಿರ ಮಾತ್ರೆ ವಿತರಣೆ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ವನೌಷಧಿಕ ಪರಂಪರಾಗತ ವೈದ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಮಾತನಾಡಿ, ಮೃಗಶಿರ ಮಾಸದಲ್ಲಿ ಅಸ್ತಮ ಮಾತ್ರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡ ಸಂಘಟನೆಯ ಕಾರ್ಯ ಶ್ಲಾಘನಿಯ ಎಂದರು. ಟ್ರಸ್ಟ್ ಅಧ್ಯಕ್ಷ ಡಾ. ಜಲಾಲುದ್ದೀನ್ ಅಕ್ಬರ್, ಪಂಡಿತ ನಾಗೇಶ ನರಹಳ್ಳಿ, ಡಾ. ಕುಮಾರಸ್ವಾಮಿ, ಸಿಂಧನೂರಿನ ವಾಸವಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ತುಕಾರಾಂ ಬಡಿಗೇರ್ ಮಾತನಾಡಿದರು. ಸಾನ್ನಿಧ್ಯವನ್ನು ಶ್ರೀಮಠದ ಕಿರಿಯ ಶ್ರೀ ಫಕಿರೇಶ್ವರ ಸ್ವಾಮಿ ವಹಿಸಿದ್ದರು. ಕಾರಲಕುಂಟಿಯ ಬಸವರಾಜ ಸ್ವಾಮಿ ಇದ್ದರು.
ಕಾಲುವೆ ದುರಸ್ತಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಾಳೆ
ಲಿಂಗಸ್ಗೂರು: ತಾಲೂಕಿನ ಗೌಡೂರು ಗ್ರಾಮದ ಜಮೀನುಗಳಲ್ಲಿ ರಾಂಪೂರ್ ಏತನೀರಾವರಿ ಯೋಜನೆ ವಿತರಣಾ ಕಾಲುವೆ ನಿರ್ಮಿಸಿರುವುದನ್ನು ವಿರೋಧಿಸಿ ಜೂ.16 ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಎಚ್ಚರಿಕೆ ನೀಡಿದ್ದಾರೆ. ಕೃಷ್ಣಾ ಭಾಗ್ಯ ಜಲನಿಗಮದಿಂದ ಗೌಡೂರು ಗ್ರಾಮದ ಸೀಮಾಂತರದಲ್ಲಿ ರಾಂಪೂರ್ ಏತನೀರಾವರಿ ಯೋಜನೆಯ ವಿತರಣಾ ಕಾಲುವೆ ನಿರ್ಮಿಸಲು ಜೆಸಿಬಿ ಯಂತ್ರದೊಂದಿಗೆ ರೈತರ ಜಮೀನಿನಲ್ಲಿ ಕಾಮಗಾರಿ ಆರಂಭಿಸಲು ಆಗಮಿಸಿದ್ದರು. ಭೂ ಪರಿಹಾರ ಹಾಗೂ ಬೆಳೆ ಪರಿಹಾರ ನಿಗದಿಪಡಿಸಿ ಸಮರ್ಪಕವಾಗಿ ವಿತರಣೆ ಮಾಡದೆ ಮತ್ತು ಸಂಬಂಧಪಟ್ಟ ರೈತರಿಗೆ ಮಾಹಿತಿ ನೀಡದೆ ಆಗಮಿಸಿದ ಪ್ರಯುಕ್ತ ಕೆಲಸ ಸ್ಥಗಿತಗೊಳಿಸುವಂತೆ ಹೇಳಲಾಗಿದೆ. ವಿತರಣಾ ಕಾಲುವೆ ನಿರ್ಮಿಸಲು ರೈತರ ಜಮೀನುಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಜೂ. 16ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ರೈತ ಸಂಘದ ತಾ. ಅಧ್ಯಕ್ಷ ಸಿದ್ಧೇಶ ಗೌಡೂರು, ಮುಖಂಡರಾದ ಬಸಪ್ಪ, ಶಿವಾಜಿ, ಅಮರೇಶ, ಭೀಮಣ್ಣ, ಶರಬಣ್ಣವರ್ ಇದ್ದರು.
ಶರಣಪ್ಪ ಮಟ್ಟೂರು ಪರ ಶಾಸಕರ ಮತಯಾಚನೆ
ಸಿಂಧನೂರು: ತಾಲೂಕಿನ ಹೊಸಳ್ಳಿ(ಇ.ಜೆ)ಯಲ್ಲಿರುವ ವಿಕಾಸ ಪ್ರೌಢಶಾಲೆಯಲ್ಲಿ ವಿಧಾನಪರಿಷತ್ ಚುನಾವಣೆಯ ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರಣಪ್ಪ ಮಟ್ಟೂರವರ ಪರವಾಗಿ ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು ಶರಣಪ್ಪ ಮಟ್ಟೂರವರು ಮೂಲತಃ ಸಂಭಾವೀಯ ವ್ಯಕ್ತಿ. ಇವರನ್ನು ಆರಿಸಿ ತಂದರೆ ಶಿಕ್ಷಕರಿಗೆ ಮತ್ತು ಅವರ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ಜಾರಿಗೆ ತರುವುದರ ಜೊತೆಗೆ ಶಿಕ್ಷಕರಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ವಿಧಾನಪರಿಷತ್ ಒಳಗೆ ಮತ್ತು ಹೊರಗೆ ಹೋರಾಟ ಮಾಡುವ ಛಲ ಇವರಲ್ಲಿದೆ. ಆದ್ದರಿಂದ ಶಿಕ್ಷಕರ ಸಮುದಾಯವು ಇವರಿಗೆ ಮತ ಹಾಕುವಂತೆ ಮನವಿ ಮಾಡಿದರು. ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ, ಕಾಂಗ್ರೆಸ್ನ್ಗರ ಘಟದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ವಿಜೇತ ಆರ್.ಸಿ. ಪಾಟೀಲ್, ನಗರಸಭೆ ಸದಸ್ಯರಾದ ಪ್ರಭುರಾಜ, ಶೇಖರಪ್ಪ ಗಿಣಿವಾರ, ಸಂಜಯ್ ಪಾಟೀಲ್, ಶರಣೇಗೌಡ ಗದ್ರಟಗಿ ಮತ್ತಿತರರು ಇದ್ದರು.