ನಿರಂತರ ಜ್ಯೋತಿ ಖಂಡಿಸಿ ಧರಣಿ
ಲಿಂಗಸ್ಗೂರು: ತಾಲೂಕಿನ ನಾಗಲಾಪುರ ಗ್ರಾಮದ ರೈತರ ಹಿತರಕ್ಷಣಾ ಸಮಿತಿಯಿಂದ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ವಿರೋಧಿಸಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಗುರುಭವನದಿಂದ ಜೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನಿರಂತರ ಜ್ಯೋತಿ ವಿದ್ಯುತ್ ಅಳವಡಿಸಿ ರೈತರ ಪಂಪ್ಸೆಟ್ಗಳಿಗೆ ಕೇವಲ 6 ತಾಸು ವಿದ್ಯುತ್ ಪೂರೈಸುವ ಉದ್ದೇಶ ರೈತರ ಬೆನ್ನೆಲುಬು ಮುರಿದಂತಾಗಿದೆ. ಅಂತರ್ಜಲ ಮಟ್ಟ ಕುಸಿದು ನೀರಿನ ಮೂಲವಿಲ್ಲದೆ ಅಲ್ಪ ಸ್ವಲ್ಪ ನೀರು ಬಳಸಿಕೊಂಡು ಹಾಗೂ ಶೇಖರಣೆ ಮಾಡಿಕೊಂಡು ಜಮೀನುಗಳಲ್ಲಿ ಕೃಷಿ ಉತ್ಪನ್ನ ಬೆಳೆ ಬೆಳೆದು ಜೀವನ ಸಾಗಿಸುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ರೈತರಿಗೆ ಮಾರಕವಾದ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ತಕ್ಷಣ ಕೈಬಿಡಬೇಕು. ರೈತರ ಪಂಪ್ಸೆಟ್ಗಳಿಗೆ ನಿರಂತರ 10 ತಾಸು ತ್ರೀಫೇಸ್ ಹಾಗೂ ರಾತ್ರಿ ವೇಳೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಒದಗಿಸಬೇಕು. ನಾಗಲಾಪುರ ಸ್ಚೇಷನ್ ವ್ಯಾಪ್ತಿಯ ಹಳ್ಳಿಗಳ ಲೈನ್ಗಳಿಗೆ ಜೆಒಸಿ ಅಳವಡಿಸಿ ಸಮಸ್ಯೆ ಪರಿಹರಿಸಬೇಕು. ಜೆಸ್ಕಾಂ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಬೇಕು. ಗ್ರಾಮಕ್ಕೆ ಪ್ರತ್ಯೇಕ ಫಿಲ್ಟರ್ ಅಳವಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಸಮಿತಿ ಸೋಮಶೇಖರ ಪೂಜಾರಿ, ವೆಂಕನಗೌಡ, ಶಿವಗ್ಯಾನಪ್ಪ, ದ್ಯಾವಣ್ಣ, ಹನುಮಪ್ಪ, ಶೇಖರಗೌಡ, ಪರಸಪ್ಪ, ಶಂಭಣ್ಣ, ಪಿ.ಟಿ. ನಾಯ್ಕ, ಅಮರಪ್ಪ, ಲಕ್ಷ್ಮಣ ರಾಠೋಡ, ಶೇಖರಗೌಡ, ಶರಣಪ್ಪ ಮಸ್ಕಿ, ದುರುಗಪ್ಪ, ಯಮನೂರಸಾಬ ಸೇರಿದಂತೆ ಇದ್ದರು.
ವಿದ್ಯುತ್ ಲೈನ್ ಯಥಾಸ್ಥಿತಿಗೆ ಒತ್ತಾಯ: ತಾಲೂಕಿನ ಮಾವಿನಬಾವಿ ವಿದ್ಯುತ್ ಲೈನ್ ತೆಗೆದು ಮುದಗಲ್ ಲೈನ್ ಯಥಾಸ್ಥಿತಿ ಮುಂದುವರಿಸಬೇಕೆಂದು ಒತ್ತಾಯಿಸಿ ಕನ್ನಾಪುರ ಹಟ್ಟಿ ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಳೆದ 25 ವರ್ಷಗಳಿಂದ ಮುದಗಲ್ ಗ್ರಿಡ್ನಿಂದ ಹಾದು ಹೋಗುವ ಆಮದಿಹಾಳ ಫಿಲ್ಟರ್ನಿಂದ ಕನ್ನಾಪುರ ಹಟ್ಟಿ ಗ್ರಾಮಕ್ಕೆ ಬರುವ ಲೈನ್ ಬದಲಾವಣೆ ಮಾಡಿ ಮಾವಿನಬಾವಿ ಫಿಲ್ಟರ್ ಲೈನ್ ಹಾಕಿರುವುದರಿಂದ ಗ್ರಾಮ ಹಾಗೂ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ತೊಂದರೆಯಾಗಿದೆ. 10ರಿಂದ 15 ಪಂಪ್ಸೆಟ್ಗಳು ಸುಟ್ಟು ಹೋಗಿವೆ. ಕಾರಣ ಮುದಗಲ್ ಲೈನ್ ಹಾಕಿ ಯಥಾಸ್ಥಿತಿ ಮುಂದುವರಿಸಬೇಕೆಂದು ಗ್ರಾಮದ ಬಾಳಯ್ಯ, ರಾಮಣ್ಣ, ಶಂಕ್ರಪ್ಪ, ಲಕ್ಷ್ಮಣ, ದುರುಗಪ್ಪ, ಮಲ್ಲಪ್ಪ ಸೇರಿದಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.