ರಕ್ಷಣೆ ನೀಡುವಂತೆ ವೇದಿಕೆ ಆಗ್ರಹ
ರಾಯಚೂರು: ನಗರದ ಟೀಚರ್ಸ್ ಕಾಲನಿ ಪಕ್ಕದ ಸರ್ವೇ ನಂಬರ್ 350/2ರಲ್ಲಿನ ಜಾಗವನ್ನು ಅದರ ಮಾಲೀಕರು ಮಾರಾಟ ಮಾಡಿ ಅಲ್ಲಿ ವಾಸವಾಗಿದ್ದವರಿಗೆ ಜಾಗ ತೆರವಿಗೆ ಬೆದರಿಕೆಯೊಡ್ಡುತ್ತಿದ್ದಾರೆಂದು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಆರೋಪಿಸಿದೆ. ಈ ಕುರಿತು ಸೋಮವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ಸಂಘಟನೆಯವರು, ಟೀಚರ್ಸ್ ಕಾಲನಿ ಪಕ್ಕದ ಸರ್ವೇ ನಂಬರ್ 350/2ರಲ್ಲಿ 2.29 ಎಕರೆ ಪ್ರದೇಶದ ಮಾಲೀಕರು ಆ ಪ್ರದೇಶದಲ್ಲಿಯೇ ವಾಸವಾಗಿದ್ದವರಿಗೆ ಈ ಹಿಂದೆ 4ರಿಂದ 5 ಸಾವಿರ ರು.ಗೆ ಮಾರಾಟ ಮಾಡಿ ದಾಖಲೆಯಲ್ಲಿ ಸಹಿ ಮಾಡಿಕೊಟ್ಟಿದ್ದಾರೆ. ಸದ್ಯ ಅದೇ ಸ್ಥಳವನ್ನು ಇಬ್ಬರ ಹೆಸರಿನಲ್ಲಿ ಬರೆದುಕೊಟ್ಟು ಗೊಂದಲ ಸೃಷ್ಟಿಸಿ ನಿವಾಸಿಗಳಿಗೆ ಜಾಗ ಖಾಲಿ ಮಾಡಲು ಬೆದರಿಕೆಯೊಡ್ಡುತ್ತಿದ್ದಾರೆಂದು ದೂರಿದ್ದಾರೆ. ಜಿಲ್ಲಾಡಳಿತ ಸೂಕ್ತ ರಕ್ಷಣೆ ಒದಗಿಸುವಂತೆ ಸಂಘಟನೆ ಆಗ್ರಹಿಸಿದೆ.