ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೋರಾಟದಿಂದ ಪರಿಹಾರ ಸಾಧ್ಯ

Lingaraj Badiger
Updated On : 17 Jun 2014, 10:53 am

ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಭಾಸಚಂದ್ರ ಬೋಸ್ ಅವರಿಗೆ ಸಿಪಿಐ, ಸಿಪಿಎಂ ಪಕ್ಷಗಳು ಹಾಗೂ ಪ್ರಗತಿಪರರು ಬೆಂಬಲಿಸಿದ್ದು, ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಸ್ಪರ್ಧಿಸಬೇಕು ಎಂಬ ಆಶಯಕ್ಕೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಪಿಎಂ ರಾಜ್ಯ ಮಂಡಳಿ ಸದಸ್ಯ ಡಾ. ಕೆ.ಎಸ್. ಜನಾರ್ದನ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿ ಸುಭಾಸಚಂದ್ರ ಬೋಸ್ ಅವರು ವಿದ್ಯಾರ್ಥಿ ಜೀವನದಿಂದಲೇ ಎಡಪಂಕ್ತಿಯ ಹೋರಾಟದಲ್ಲಿ ತೊಡಗಿಕೊಂಡವರಾಗಿದ್ದು, ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಅವರಿಗೆ ಗೊತ್ತಿದೆ ಎಂದು ಹೇಳಿದರು.
ಸಮಸ್ಯೆಗಳು ಪರಿಹಾರ ಕಂಡಿಲ್ಲ: ಇಂದಿನ ಸರ್ಕಾರಗಳು ಬಂಡವಾಳಶಾಹಿ ಪರ ನೀತಿಗೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ದುರ್ಬಲಗೊಳಿಸುತ್ತಿವೆ. ಆಡಳಿತಗಾರರ ಇಂಥ ಕುತಂತ್ರದ ವಿರುದ್ಧ ಸದನದ ಒಳಗೆ ಮತ್ತು ಹೊರಗೂ ಹೋರಾಡುವುದು ತುರ್ತು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸುಭಾಸಚಂದ್ರ ಬೋಸ್ ಅವರು ಸೂಕ್ತ ಅಭ್ಯರ್ಥಿಯಾಗಿದ್ದಾರೆಂದು ಹೇಳಿದರು.
ಇದುವರೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳು ಶಿಕ್ಷಕರನ್ನು ಸಂಪೂರ್ಣ ಕಡೆಗಣಿಸಿದ್ದು, ಶಿಕ್ಷಣ ಕ್ಷೇತ್ರದ ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲದವರು ಸ್ಪರ್ಧಿಸಿ ಗೆದಿದ್ದರಿಂದ ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಹಾಗೆಯೇ ಹೈ.ಕ. ಪ್ರದೇಶದ ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗಿದೆ ಎಂದು ಟೀಕಿಸಿದರು. ಮಲ್ಲಯ್ಯ ಜಾಲಹಳ್ಳಿ, ಅಮೀರ್ ಅಲಿ, ಸಂಗಯ್ಯಸ್ವಾಮಿ ಚಿಂಚರಕಿ, ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement