6 ಜನ ಅಂತಾರಾಜ್ಯ ದರೋಡೆಕೋರರ ಬಂಧನ
ರಾಯಚೂರು: ಮಾನವಿ ತಾಲೂಕಿನ ರಾಮನಾಥ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಮಾನವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರದ ವಿಶಾಖಪಟ್ಟಣಂನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಪಾಲಾ ವೆಂಕಟೇಶ್ವರರಾವ್, ಪಾಲಾ ಶಿವು, ಪಾಲಾ ವಿಜಯ್, ಪಾಲಾ ಕರ್ಣ, ಪಾಲಾ ಜಸ್ವ, ನೀಲಂ ಶ್ರೀರಾಮ ವಿಜಿ ಎಂದು ಗುರುತಿಸಲಾಗಿದೆ. ಇವರು ಐದು ದರೋಡೆ ಸೇರಿದಂತೆ ವಿವಿಧ 19 ಕೇಸ್ಗಳಲ್ಲಿ ಅಪರಾಧ ಎಸಗಿರುವುದು ವಿಚಾರಣೆಯಿಂದ ಬಯಲಾಗಿದೆ.
ಮಾನವಿ ತಾಲೂಕಿನ ರಾಮನಾಥ ಕ್ಯಾಂಪಿನಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ನವೀನ್ ಎಂಬುವವರ ಮನೆಯಿಂದ ದೋಚಿದ್ದ ಐದು ಚಿನ್ನದ ಬಳೆಗಳನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ನೆರೆಯ ಆಂಧ್ರದ ಅನಂತಪುರ ಮೂಲದವರಾದ ಈ ಆರೋಪಿಗಳನ್ನು ಆಂಧ್ರದ ಪೊಲೀಸರ ನೆರವಿನೊಂದಿಗೆ ಮಾನವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.