ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧನೂರು-ಮಸ್ಕಿ ರಸ್ತೆ ಕಾಮಗಾರಿ ಮಾಡಿ

Rashmi Kasaragodu
Updated On : 18 Jun 2014, 11:40 am

ಸಿಂಧನೂರು: ಇಲ್ಲಿನ ಸಿಂಧನೂರು-ಮಸ್ಕಿ ರಸ್ತೆ ವಿಪರೀತ ಹದಗೆಟ್ಟಿದ್ದು, ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಮಸ್ಕಿ ವಿಧಾನಸಭಾ ಕ್ಷೇತ್ರದ ಹಾಲಾಪುರ ಗ್ರಾಮದ ಮುಖಂಡ ವಿನೋದಕುಮಾರ ಮನವಿ ಮಾಡಿದರು. ರಸ್ತೆ ಮಾರ್ಗದಲ್ಲಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಸಾಲು ಸಾಲು ತಗ್ಗುಗಳು ಬಿದ್ದಿವೆ. ಈ ಮಾರ್ಗವಾಗಿ ಪ್ರಯಾಣಿಸುವ ಜನರಿಗೆ ಮೈ-ಕೈ ನೋವು ಕಾಣಿಸಿಕೊಂಡು ನರಳುವಂತಾಗಿದೆ. ಇದಲ್ಲದೇ ಸಿಂಧನೂರಿನಲ್ಲಿ ದೊಡ್ಡ ಆಸ್ಪತ್ರೆಗಳಿದ್ದು ಮಸ್ಕಿಯಿಂದ ಬರುವ ಅನೇಕ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಜಂಗಲ್ ಕಟಿಂಗ್, ಮೊರಂ ಹಾಕುವುದು, ಮೆಟಲಿಂಗ್ ಕಾರ್ಯ ಹೀಗೆ ಅನೇಕ ಕೆಲಸಗಳು ನಡೆದಿದೆ. ಆದರೇ ಪ್ರಯಾಣಿಕರ ದುರಾದೃಷ್ಟಕ್ಕೆ ಯಾವುದೊಂದು ಫಲದಾಯಕವಾಗಿಲ್ಲ ಎಂದು ಟೀಕಿಸಿದರು.


ಉಪಕಾಲುವೆ ದುರಸ್ತಿ ಕಾಮಗಾರಿ ಕಳಪೆ
ಸಿಂಧನೂರು: ತಾಲೂಕಿನ ಅರಳಹಳ್ಳಿ ಗ್ರಾಮದ ಹತ್ತಿರ 40ನೇ ಉಪಕಾಲುವೆಯ ದುರಸ್ತಿ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಗ್ರಾಮದ ರೈತರಾದ ಬಸವರಾಜ, ಹನುಮಂತ, ರಡ್ಡೆರ ಬಸಪ್ಪ ಮತ್ತಿತರರು ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ತುಂಗಭದ್ರಾ ಎಡದಂಡೆ ನಾಲೆಯ 40ನೇ ಉಪಕಾಲುವೆ ಕಾಮಗಾರಿ ಪ್ರಾರಂಭಗೊಂಡು ಹಲವು ದಿನಗಳು ಕಳೆದಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ಸಂಶಯ ಮೂಡಿದೆ. ಪಕ್ಕದ ಹೊಲಗಳಲ್ಲಿರುವ ಮಣ್ಣನ್ನು ತಂದು ಕಾಲುವೆ ಕೆಲಸಕ್ಕೆ ಬಳಸಲಾಗುತ್ತಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಇದರ ಮೇಲೆ ಮೊರಂ ಹಾಕುವುದಾಗಿ ಅಧಿಕಾರಿಗಳು ಹೇಳುತ್ತಾರೆ ಎಂದು ರೈತರು ಆಪಾದಿಸಿದ್ದಾರೆ.

'ಜನಪ್ರತಿನಿಧಿಗಳಿಂದ ಅನ್ನ ನೀಡುವವನಿಗೇ ಚೂರಿ'
ಸಿಂಧನೂರು: ಎಡದಂಡೆ ಕಾಲುವೆ ಕಾಮಗಾರಿಯು ಗುತ್ತೇದಾರರೆ ನಿರ್ವಹಿಸಬೇಕು. ಆದರೆ ಇಲ್ಲಿ ಉಪಗುತ್ತಿಗೆಯಲ್ಲಿ ಕಾಮಗಾರಿ ನಡೆಯುತ್ತಿವೆ. ಇದರಲ್ಲಿ ಸಚಿವ ಶಿವರಾಜ ತಂಗಡಗಿ, ಸ್ಥಳೀಯ ಶಾಸಕರಾದ ಹಂಪನಗೌಡ, ಪ್ರತಾಪಗೌಡ ಪಾಟೀಲ್ ಗುತ್ತೇದಾರರ ಜೊತೆ ಒಪ್ಪಂದ ಮಾಡಿಕೊಂಡು ಕಾರ್ಯಕರ್ತರಿಗೆ ಉಪಗುತ್ತಿಗೆ ಕೊಡಿಸಿದ್ದಾರೆ. ಇದರಿಂದಾಗಿ ಕಾಮಗಾರಿ ಕಳಪೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅನ್ನ ನೀಡುವ ರೈತನಿಗೆ ಚೂರಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಸಂಸದ, ಬಿ.ಜೆ.ಪಿ. ಮುಖಂಡ ಕೆ.ವಿರುಪಾಕ್ಷಪ್ಪ ಆರೋಪಿಸಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಲುವೆ ಆಧುನೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ವೆಂಕಟರಾವ ನಾಡಗೌಡರ ಕಾರ್ಯಕರ್ತರಿಗಾಗಿ ಗಂಜೀಕೇಂದ್ರ ಆರಂಭಿಸಿದರು. ಈಗ ಹಾಲಿ ಶಾಸಕ ಹಂಪನಗೌಡ ಬಾದರ್ಲಿ ಮುಂದುವರೆಸಿಕೊಂಡು ಹೊರಟಿದ್ದಾರೆ. ಇದರಿಂದಾಗಿ ಕಾಲುವೆ ಕಾಮಗಾರಿ ಕಳಪೆಯಾಗುತ್ತಿದೆ ಎಂದು ದೂರಿದರು. ನಗರೋತ್ಥಾನ ಯೋಜನೆಯಡಿ ನಗರಸಭೆಗೆ ಬಿಡುಗಡೆಯಾದ 15 ಕೋಟಿ ರೂ.ಗಳು 8 ವರ್ಷಗಳಾದರೂ ಬಳಕೆಯಾಗಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಇನ್ನೂ ಆರಂಭವಾಗದ ಸಿಂಧನೂರು-ಮಸ್ಕಿ ರಸ್ತೆ, ಯು.ಜಿ.ಡಿ., ಬೃಹತ್ ಕುಡಿಯುವ ನೀರಿನ ಯೋಜನೆಗಳ ಕಾರ್ಯಗತವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲು ಹಂಪನಗೌಡ ಇನ್ನೊಂದು ಬಾರಿ ಶಾಸಕರಾಗಬೇಕೆ? ಎಂದು ವ್ಯಂಗ್ಯವಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement