ಜಸಂಪದಿಂದ ಡಾ. ಉಸ್ತಾದ್ ಉಚ್ಚಾಟನೆ
ರಾಯಚೂರು: ಜನಸಂಗ್ರಾಮ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ, ಜಿಲ್ಲಾ ಉಪಾಧ್ಯಕ್ಷರಾಗಿದ್ದ ಡಾ. ರಜಾಕ್ ಉಸ್ತಾದ್ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದಲ್ಲಿ ಬುಧವಾರ ಹೈ-ಕ ಜನಾಂದೋಲನ ಕೇಂದ್ರ ಮತ್ತು ಜನಸಂಗ್ರಾಮ ಪರಿಷತ್ತಿನಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ. ರಜಾಕ್ ಉಸ್ತಾದ್ ಅವರು ಈಶಾನ್ಯ ಕ್ಷೇತ್ರದ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದರು.
ಅದಕ್ಕಾಗಿ ಕಾಂಗ್ರೆಸ್ ಟಿಕೆಟ್ಗೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ತಾವೂ ವೈಯಕ್ತಿಕವಾಗಿ ಬೋಸರಾಜು, ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಪುರ ಅವರೊಂದಿಗೆ ಮಾತುಕತೆ ನಡೆಸಿ ಟಿಕೆಟ್ ನೀಡಲು ಕೋರಿದ್ದಾಗಿ ಹೇಳಿದರು.
ಸಂಘಟನೆ ಆಶಯಕ್ಕೆ ಧಕ್ಕೆ: ಆದರೆ ಕಾಂಗ್ರೆಸ್ ಟಿಕೆಟ್ ದೊರೆಯದೇ ಹೋದಾಗ ಡಾ. ರಜಾಕ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ ಹೊತ್ತ ಶಶಿಲ್ ನಮೋಶಿ ಪರ ಪ್ರಚಾರಕ್ಕೆ ತೊಡಗಿರುವುದು ಕಂಡುಬಂದಿದೆ. ಹಿಂದೊಮ್ಮೆ ಅದೇ ನಮೋಶಿ ವಿರುದ್ಧ ಜನಸಂಗ್ರಾಮ ಪರಿಷತ್ ಸಂಘಟನೆ ಮೂಲಕ ಹೋರಾಡಿದ್ದ ಡಾ. ರಜಾಕ್ ಉಸ್ತಾದ್ ಸದ್ಯ ಅವರ ಪರವೇ ನಿಂತಿರುವುದು ಸಂಘಟನೆಯ ಆಶಯಕ್ಕೆ ಧಕ್ಕೆ ತಂದಿದೆ ಎಂದು ದೂರಿದರು.
ಈ ಮೊದಲು ಜನಸಂಗ್ರಾಮ ಪರಿಷತ್ತಿನಿಂದ ನಡೆಸಿದ್ದ ಅನುದಾನರಹಿತ ಶಿಕ್ಷಕರ ಕಾರ್ಯಾಗಾರದಲ್ಲಿನ ಸಂಪರ್ಕ ದುರ್ಬಳಕೆ ಮಾಡಿಕೊಂಡಿರುವ ರಜಾಕ್ ಉಸ್ತಾದ್, ಆ ಸಂಘದ ಶಿಕ್ಷಕರಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದು ಇದು ಸಂಘಟನೆಯ ವಿಚಾರಗಳಿಗೆ ವಿರೋಧಿ ವರ್ತನೆಯಾಗಿದೆ ಎಂದು ದೂರಿದರು.
ಉಚ್ಚಾಟನೆಗೇನು ಕಾರಣ?: ಅದೇ ರೀತಿ ಡಾ. ರಜಾಕ್ ಅವರು ಸಂಘಟನೆಗೆ ತಿಳಿಯದಂತೆ ಹಟ್ಟಿಯಲ್ಲಿ ಶೈಕ್ಷಣಿಕ ಸಂಸ್ಥೆ ನಡೆಸುತ್ತಿದ್ದು, ಅದಕ್ಕಾಗಿ ಹಿಂದೆ ಎಂಎಲ್ಸಿಯಾಗಿದ್ದ ಎನ್.ಶಂಕ್ರಪ್ಪ ಅವರಿಂದ 5 ಲಕ್ಷ ಅನುದಾನ ಪಡೆದಿದ್ದಾರೆ. ಇಂಥ ಎಲ್ಲ ಸಂಘಟನೆ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅವರನ್ನು ಸಂಘಟನೆಯಿಂದ ಹೊರಹಾಕಲು ನಿರ್ಧರಿಸಿತೆಂದು ಹೇಳಿದರು. ಡಾ. ರಜಾಕ್ ಉಸ್ತಾದ್ ಅವರು ಶಶಿಲ್ ನಮೋಶಿ ಪರ ಪ್ರಚಾರ ಕೈಬಿಟ್ಟು ತಮ್ಮಿಂದಾದ ಇನ್ನಿತರೆ ವಿಚಾರಗಳ ತಪ್ಪಿಗೆ ಸಂಬಂಧಿಸಿ ಸಂಘಟನೆಯ ಕ್ಷಮೆಯಾಚಿಸಿ ಪತ್ರ ಬರೆದಲ್ಲಿ ಅವರನ್ನು ಪುನಾ ಸೇರ್ಪಡೆ ನಿಟ್ಟಿನಲ್ಲಿ ಸಂಘಟನೆ ಪರಿಶೀಲಿಸಲಿದೆ ಎಂದು ತಿಳಿಸಿದರು.